ನವದೆಹಲಿ: ಕರ್ನಾಟಕ ಸರ್ಕಾರ ಲಕ್ಷಾಂತರ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಕೇವಲ 800 ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ಮೋಸ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋಡಿ ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ಮುಂಬರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ರಾಜಕೀಯ ಪಕ್ಷಗಳ ಮೇಲೆ ವಾಗ್ದಾಳಿ ಆರಂಭಿಸಿರುವ ಪ್ರಧಾನಿ ಮೋದಿ, ಉತ್ತರಪ್ರದೇಶದ ಘಾಜಿಪುರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.


''ಕರ್ನಾಟಕದಲ್ಲಿ ಲಕ್ಷಾಂತರ ರೈತರ ಸಾಲ ಮನ್ನಾ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಸರಕಾರ ಭರವಸೆ ನೀಡಿತ್ತು. ಆದರೆ, ಕೇವಲ 800 ರೈತರ ಸಾಲ ಮನ್ನಾ ಮಾತ್ರ ಮಾಡಿದೆ. ಇದು ಯಾವ ರೀತಿಯ ಆಟ, ಯಾವ ರೀತಿಯ ಮೋಸ'' ಎಂದು ಕಾಂಗ್ರೆಸ್ - ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಟೀಕಿಸಿದರು.



ಅಷ್ಟೇ ಅಲ್ಲದೆ, ''ಮುಂಬರುವ ಸಮಯ ನಿಮಗಾಗಿ ಹಾಗೂ ನಿಮ್ಮ ಮಕ್ಕಳಿಗಾಗಿ. ಹೀಗಾಗಿ, ನಿಮ್ಮ ಹಾಗೂ ಅವರ ಭವಿಷ್ಯದ ಸುಧಾರಣೆಗಾಗಿ, ನಿಮ್ಮ ಈ ಚೌಕಿದಾರ(ನರೇಂದ್ರ ಮೋದಿ) ತುಂಬ ಪ್ರಾಮಾಣಿಕವಾಗಿ, ಹಲವು ಜನರ ಜೊತೆಗೂಡಿ ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದಾನೆ'' ಎಂದು ಪ್ರಧಾನಿ ಮೋದಿ ಹೇಳಿದರು. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಪ್ರಧಾನಿ ಮೋದಿ ಜನತೆಗೆ ಕರೆ ನೀಡಿದರು.