10 ದಿನದೊಳಗೆ ದೆಹಲಿಯ ಮನೆ ಖಾಲಿ ಮಾಡಿ: ಕಾರ್ತಿ ಚಿದಂಬರಂಗೆ ಇಡಿ ಸೂಚನೆ
ಮೂಲಗಳ ಪ್ರಕಾರ ಆ ಮನೆಯು ಕಾರ್ತಿ ಚಿದಂಬರಂ ಮತ್ತು ಅವರ ತಾಯಿ ನಳಿನಿ ಚಿದಂಬರಂ ಇಬ್ಬರೂ ಜಂಟಿಯಾಗಿ ಹೊಂದಿದ್ದರು ಎನ್ನಲಾಗಿದೆ.
ನವದೆಹಲಿ: ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಈಗಾಗಲೇ ಸೀಜ್ ಮಾಡಲಾದ ಮನೆಯನ್ನು 10 ದಿನಗಳೊಳಗೆ ಖಾಲಿ ಮಾಡುವಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂಗೆ ಜಾರಿ ನಿರ್ದೇಶನಾಲಯ ಬುಧವಾರ ಸೂಚನೆ ನೀಡಿದೆ.
115-ಎ ಬ್ಲಾಕ್ 172, ಜೋರ್ ಬಾಗ್, ನವದೆಹಲಿ -3ರಲ್ಲಿರುವ ಕಾರ್ತಿ ಅವರ ಸ್ಥಿರ ಆಸ್ತಿಯನ್ನು ಕಳೆದ ವರ್ಷ ಅಕ್ಟೋಬರ್ 10 ರಂದು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿತ್ತು. ಆದಾಗ್ಯೂ ಇನ್ನೂ ಮನೆ ಖಾಲಿ ಮಾಡದ ಹಿನ್ನೆಲೆಯಲ್ಲಿ ಕೂಡಲೇ ಮನೆ ಖಾಲಿ ಮಾಡುವಂತೆ ಜಾರಿ ನಿರ್ದೇಶನಾಲಯ ಹೇಳಿದೆ.
ಮೂಲಗಳ ಪ್ರಕಾರ ಆ ಮನೆಯು ಕಾರ್ತಿ ಚಿದಂಬರಂ ಮತ್ತು ಅವರ ತಾಯಿ ನಳಿನಿ ಚಿದಂಬರಂ ಇಬ್ಬರೂ ಜಂಟಿಯಾಗಿ ಹೊಂದಿದ್ದರು ಎನ್ನಲಾಗಿದೆ.
ಮುಂದಿನ ಆದೇಶದವರೆಗೆ ಅಥವಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಆಸ್ತಿ ಜಾರಿ ನಿರ್ದೇಶನಾಲಯದ ವಶದಲ್ಲೇ ಇರಲಿದೆ ಎಂದು ಇಡಿ ಕೌನ್ಸಿಲ್ ಅಧಿಕಾರಿ ನಿತೇಶ್ ರಾಣಾ ಹೇಳಿದ್ದಾರೆ.