ಚೆನ್ನೈ: ತಮಿಳುನಾಡಿನ ಡಿಎಂಕೆ ವರಿಷ್ಠ, ದ್ರಾವಿಡ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಎಂ.ಕರುಣಾನಿಧಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಕರುಣಾನಿಧಿ ಭಾರತದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಜನ ಸಮೂಹ ನಾಯಕ, ರಾಜಕೀಯ ಚಿಂತಕ, ಕಥೆಗಾರನನ್ನು ನಾವು ಕಳೆದುಕೊಂಡಿದ್ದೇವೆ. ಬಡವರ ಕಲ್ಯಾಣಕ್ಕಾಗಿ ಅವರು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. 



ಅಲ್ಲದೇ ಕರುಣಾನಿಧಿಯವರು ರಾಜ್ಯಗಳ ಆಕಾಂಕ್ಷೆ ಹಾಗೂ ರಾಷ್ಟ್ರದ ಏಳಿಗೆಗೆ ಬದ್ಧವಾಗಿದ್ದರು. ಅಲ್ಲದೇ ತಮಿಳುನಾಡಿನ ಅಭಿವೃದ್ಧಿ ಹಾಗೂ ತಮಿಳು ಜನರ ಧ್ವನಿಯಾಗಿ ನಿಂತಿದ್ದರು. ತಮಿಳರ ಕಲ್ಯಾಣಕ್ಕೆ ದೃಢವಾಗಿ ಬದ್ಧರಾಗಿದ್ದ ಕರುಣಾನಿಧಿ ತಮಿಳುನಾಡಿನ ಜನತೆಯ ಧ್ವನಿಯಾಗಿದ್ದರು. ಹಲವಾರು ಸಂದರ್ಭಗಳಲ್ಲಿ ಕರುಣಾನಿಧಿ ಅವರೊಂದಿಗೆ ಸಂಭಾಷಣೆ ನಡೆಸುವ ಅವಕಾಶ ನಂಗೆ ದೊರೆತಿತ್ತು. ಈ ಸಂದರ್ಭದಲ್ಲಿ ಅವರಿಗೆ ಕಾನೂನಿನ ಬಗ್ಗೆ ಇರುವ ತಿಳುವಳಿಕೆ ಮತ್ತು ಸಮಾಜ ಕಲ್ಯಾಣಕ್ಕಾಗಿ ಅವರು ಎಷ್ಟು ಬದ್ಧರಾಗಿದ್ದರು ಎಂಬುದು ತಿಳಿಯುತ್ತಿತ್ತು. ಅವರ ಪ್ರಜಾಪ್ರಭುತ್ವದ ಆದರ್ಶಗಳು ಮತ್ತು ತುರ್ತುಸ್ಥಿತಿಗೆ ಅವರು ಬಲವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದುದು ಇಂದಿಗೂ ಸ್ಮರಣೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 



ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಸಹ ಕರುಣಾನಿಧಿ ಅವರ ನಿಧಾನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಮತ್ತು ಭಾರತದ ಅಭಿವೃದ್ಧಿಗೆ ಕೊಡುಗೆಯಾಗಿ ನಮ್ಮ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಜನರಿಗೆ ಕರುಣಾನಿಧಿ ಮಾದರಿಯಾಗಿದ್ದಾರೆ. ಇವರ ನಿಧನದಿಂದ ಇಂದು ನಮ್ಮ ದೇಶ ಬಡವಾಗಿದೆ. ಅವರ ಕುಟುಂಬಕ್ಕೆ ಮತ್ತು ಹಿತೈಷಿಗಳಿಗೆ ದುಃಖ ತಡೆಯುವ ಸಾಮರ್ಥ್ಯವನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.



ಕಳೆದ ಒಂದು ವಾರದಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗು ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕರುಣಾನಿಧಿ ಇಂದು ಸಂಜೆ 6.10ಕ್ಕೆ ನಿಧನರಾಗಿದ್ದಾರೆ. ಜ್ವರ ಹಾಗೂ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ ಡಿಎಂಕೆ ನಾಯಕ ಎಂ.ಕರುಣಾನಿಧಿ(94) ಅವರನ್ನು ಜುಲೈ 28ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.