ಕರುಣಾನಿಧಿ ಇನ್ನಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯವಿದೆ: ಕಾವೇರಿ ಆಸ್ಪತ್ರೆ
ಎಂ.ಕರುಣಾನಿಧಿ ಅವರು ಮತ್ತಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ಕಾವೇರಿ ಆಸ್ಪತ್ರೆ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಚೆನ್ನೈ: ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಮತ್ತಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ಕಾವೇರಿ ಆಸ್ಪತ್ರೆ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕಾವೇರಿ ಆಸ್ಪತ್ರೆ, ಕರುಣಾನಿಧಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಲಿವರ್ ಕಾರ್ಯದಲ್ಲಿ ಬದಲಾವಣೆ ಮತ್ತು ರಕ್ತದೊತ್ತಡದ ಸಮಸ್ಯೆಗಳಿಗೆ ಮತ್ತಷ್ಟು ಚಿಕಿತ್ಸೆ ಅಗತ್ಯವಿದ್ದು, ಇನ್ನಷ್ಟು ದಿನ ಆಸ್ಪತ್ರೆಯಲ್ಲಿ ಉಳಿಯಬೇಕಿದೆ ಎಂದು ಹೇಳಿದೆ.
ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಎಂ.ಕರುಣಾನಿಧಿ ಅವರನ್ನು ಶನಿವಾರ ಚೆನೈನ ಕಾವೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲದೆ, ರಕ್ತದೊತ್ತಡದಲ್ಲಿ ತೀವ್ರ ಏರುಪೇರಾಗಿ ಭಾನುವಾರ ರಾತ್ರಿ ಅವರ ಆರೋಗ್ಯ ತೀರಾ ಗಂಭೀರ ಸ್ಥಿತಿಗೆ ತಲುಪಿತ್ತು. ಆದರೆ ಸೋಮವಾರ ಕರುಣಾನಿಧಿ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು.