ಗುರುವಾಯೂರ್: ಕೇರಳದ ಜನತೆ ಬಿಜೆಪಿಗೆ ಮತ ಹಾಕದೇ ಇರಬಹುದು.  ಆದರೆ, ವಾರಣಾಸಿಯಂತೆಯೇ ನನಗೆ ಕೇರಳವೂ ಪ್ರಿಯವಾದುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಎರಡನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಕೇರಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಗುರುವಾಯೂರ್ನಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. "ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ವಿಶೇಷ ಸ್ಥಾನ ಪಡೆದಿವೆ. ಅಂತೆಯೇ ಚುನಾಯಿತನಾದ ಜನಪ್ರತಿನಿಧಿ ಇಡೀ ದೇಶದ 130 ಕೋಟಿ ಜನತೆಯ ಜವಾಬ್ದಾರಿ ಹೊತ್ತಿರುತ್ತಾನೆ. ನಮ್ಮನ್ನು ಯಾರು ಗೆಲ್ಲಿಸಿದರು, ಗೆಲ್ಲಿಸಲಿಲ್ಲ ಎಂಬುದು ಮುಖ್ಯವಲ್ಲ. ಎಲ್ಲರೂ ನಮ್ಮವರು. ಕೇರಳ ನನಗೆ ವಾರಣಾಸಿಯಂತೆಯೇ ಪ್ರಿಯವಾದುದು" ಎಂದು ಮೋದಿ ಹೇಳಿದರು. 


"ಚುನಾವಣೆಯಲ್ಲಿ ಜನರೇ ದೇವರು. ರಾಜಕೀಯ ಪಕ್ಷಗಳು, ರಾಜಕೀಯ ವಿಶ್ಲೇಷಕರಿಂದ ಜನರ ಮನಸ್ಥಿತಿ ಅರಿಯಲು ಸಾಧ್ಯವಿಲ್ಲ. ಹಾಗಾಗಿಯೇ ಬಿಜೆಪಿಗೆ ಬಹುಮತ ದೊರೆತಿದೆ. ಬಿಜೆಪಿ ಪ್ರಚಂಡ ಗೆಲುವಿಗೆ ಕಾರಣರಾದ ಮತದಾರರೆಲ್ಲರಿಗೂ ಧನ್ಯವಾದಗಳು" ಎಂದು ಮೋದಿ ಹೇಳಿದರು.


"ಚುನಾವಣೆ ಹಾಗೂ ರಾಜಕೀಯ ಪಕ್ಷಗಳು ಪ್ರತ್ಯೇಕವಾದವು. ಬಿಜೆಪಿ ಖಾತೆ ತೆರೆಯದೇ ಕೇರಳಕ್ಕೆ ಪ್ರಧಾನಿ ಮೋದಿ ಏಕೆ ಬಂದಿದ್ದಾರೆ ಎಂದು ಕೆಲವರು ಯೋಚಿಸುತ್ತಿರಬಹುದು. ನನ್ನ ತಲೆಯಲ್ಲಿ ಏನಿದೆ? ಎಂದೂ ಅಂದುಕೊಳ್ಳುತ್ತಿರಬಹುದು. ಆದರೆ, ಇದೇ ನಮ್ಮ ಸಂಸ್ಕೃತಿ, ನಮ್ಮ ಚಿಂತನೆ. ಉಡುಪಿ, ಗುರುವಾಯೂರ್​ ಅಥವಾ ದ್ವಾರಕಾದೀಶ​ ಯಾವುದೇ ಪ್ರದೇಶವಿರಲಿ ನಾನು ಗುಜರಾತಿನ ಜನರಂತೆಯೇ ಭಾವನಾತ್ಮಕವಾಗಿ ಸಂಬಂಧ ಹೊಂದಿದ್ದೇನೆ. ಗುಜರಾತ್​ನಿಂದ ದ್ವಾರಕಾದೀಶ, ಅಲ್ಲಿಂದ ಗುರುವಾಯೂರಿಗೆ ಬಂದಿದ್ದು, ನನಗೆ ಅದ್ಭುತ ಅನುಭವ ನೀಡಿದೆ" ಎಂದು ಮೋದಿ ಭಾವನಾತ್ಮಕವಾಗಿ ಹೇಳಿದರು.


ಮುಂದುವರೆದು ಮಾತನಾಡುತ್ತಾ, ಬಿಜೆಪಿ ಕಾರ್ಯಕರ್ತರು ಚುನಾವಣೆ ವೇಳೆ ಮಾತ್ರವಲ್ಲದೇ ವರ್ಷದ 365 ದಿನಗಳೂ ಪಕ್ಷಕ್ಕಾಗಿ ಶ್ರಮ ವಹಿಸಬೇಕು. ರಾಜಕಾರಣ ಚುನಾವಣೆಗಾಗಿ ಅಷ್ಟೆ. ಆದರೆ, ದೇಶ ಕಟ್ಟಲು ತಪಸ್ಸನ್ನೇ ಆಚರಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಸ್ಥಾನ ಪಡೆಯಲು ಶ್ರಮಿಸಬೇಕು ಎಂದು ಮೋದಿ ಹೇಳಿದರು.


ನಿಫಾ ವೈರಸ್ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಸಾಕು ಹರಡುವಿಕೆ ತಡೆಗೆ ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಲ್ಲಾ ಅಗತ್ಯ ನೆರವನ್ನೂ ನೀಡುತ್ತಿದೆ. ಹೆಗಲಿಗೆ ಹೆಗಲು ಕೊಟ್ಟು ಈ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.


ಇದಕ್ಕೂ ಮುನ್ನ ಗುರುವಾಯೂರಿನ ಶ್ರೀಕೃಷ್ಣನ ದೇವಸ್ಥಾನಕ್ಕೆ ತೆರಳಿದ ಮೋದಿ, ವಿಶೇಷ ಪೂಜೆ ಸಲ್ಲಿಸಿ ತಾವರೆ ಹೂವಿನಿಂದ ತುಲಾಭಾರ ಸೇವೆ ನೆರವೇರಿಸಿದರು.