Kerala Assembly Election: ಕೇರಳ LDF ಸರ್ಕಾರದ ವಿರುದ್ಧ ಡಿಸಿಎಂ ವಾಗ್ಧಾಳಿ
ಹೂಡಿಕೆ ಇಲ್ಲ, ಉದ್ಯೋಗ ಸೃಷ್ಟಿ ಆಗಿಲ್ಲ, ಸ್ವಜನ ಪಕ್ಷಪಾತವೇ ಎಲ್ಲ ಎಂದ ಡಾ.ಸಿ.ಎನ್.ಅಶ್ವತ್ಥನಾರಾಯಣ
ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆ ಪ್ರಚಾರ ಭರದಿಂದ ಸಾಗಿದೆ. ಈ ಸಂದರ್ಭದಲ್ಲಿ ಕೇರಳದ ಎಲ್‌ಡಿಎಫ್ ಸರಕಾರ ಎಲ್ಲ ಕ್ಷೇತ್ರಗಳ್ಲಲೂ ವಿಫಲವಾಗಿದೆ. ದುರಾಡಳಿತ ಮತ್ತು ಸ್ವಜನ ಪಕ್ಷಪಾತದಿಂದ ರಾಜ್ಯವು ಇತರೆ ಎಲ್ಲ ರಾಜ್ಯಗಳಿಗಿಂತ ಹಿಂದೆ ಬಿದ್ದಿದೆ ಎಂದು ಕೇರಳದ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ(Dr CN Ashwathnarayan) ಗಂಭೀರ ಆರೋಪ ಮಾಡಿದ್ದಾರೆ.
ತಿರುವನಂತಪುರದಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಚಾರದ ವಿಡಿಯೊ ತುಣುಕುಗಳನ್ನು ಬಿಡುಗಡೆ ಮಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr CN Ashwathnarayan), ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi vijayan) ಅವರ ಎಲ್‌ಡಿಎಫ್ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಉದ್ಯೋಗ ಸೃಷ್ಟಿ ಆಗಿಲ್ಲ :
ಎಲ್‌ಡಿಎಫ್ ಸರಕಾರ ಎಲ್ಲ ಕ್ಷೇತ್ರಗಳಲ್ಲಿ ವೈಫಲ್ಯತೆ ಹೊಂದಿದೆ. ಮಾತ್ರವಲ್ಲ, ರಾಜ್ಯದಲ್ಲಿ ಹೂಡಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವಲ್ಲಿ ಸಂಪೂರ್ಣ ಸೋತಿದೆ. ಉದ್ಯೋಗ ಸೃಷ್ಟಿಯಲ್ಲಿ ಘೋರವಾಗಿ ವಿಫಲವಾಗಿದೆ. ಹೀಗಾಗಿ ಕೇರಳದ ವಿದ್ಯಾವಂತ ಯುವ ಜನರು ಕೆಲಸಕ್ಕಾಗಿ ಬೇರೆ ಬೇರೆ ಕಡೆ ಹೋಗಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ ಎಂದು ಡಿಸಿಎಂ ದೂರಿದರು.
ಇದನ್ನೂ ಓದಿ - ವಿವಾದ ಸೃಷ್ಟಿಸಿದ ಕೇರಳದ ಪೋಲಿಸ್ ತಿದ್ದುಪಡಿ ಕಾಯ್ದೆ
ಇಡೀ ದೇಶವೇ ಮುಮ್ಮುಖವಾಗಿ ಚಲಿಸುತ್ತ ಕೈಗಾರಿಕೆ, ಉದ್ಯೋಗ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಅಗಾಧ ಸುಧಾರಣೆಗಳನ್ನು ತಂದು ಜನರಿಗೆ ಒಳ್ಳೆಯದು ಮಾಡುತ್ತಿದ್ದರೆ, ಕೇರಳ ಹಿಮ್ಮುಖವಾಗಿ ಚಲಿಸುತ್ತಿದೆ. ಅಂದರೆ; ಅಭಿವೃದ್ಧಿಗೆ ವಿರುದ್ಧವಾಗಿ ಚಲಿಸುತ್ತಿದೆ. ಕೃಷಿಯಲ್ಲಿ ಸ್ವಾವಲಂಭಿಯಗಿದ್ದ ರಾಜ್ಯವನ್ನು ಹಾಳುಗೆಡವಿದೆ. ಎಲ್‌ಡಿಎಫ್ ಸರಕಾರವು ಜನರ ಆಶೋತ್ತರಗಳನ್ನು ಗಾಳಿಗೆ ತೂರಿ ಸವಕಲು, ಅಪ್ರಸ್ತುತ ವಿಚಾರಗಳ ಮೂಲಕ ರಾಜ್ಯವನ್ನು ಕತ್ತಲೆಯಲ್ಲಿಟ್ಟಿದೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayan) ಗಂಭೀರ ಆರೋಪ ಮಾಡಿದರು.
ಸ್ವಜನ ಪಕ್ಷಪಾತದ ವಿಜೃಂಭಣೆ :
ಕೇರಳ ಸರಕಾರ ಹಾಗೂ ಆಡಳಿತಾರೂಢ ಪಕ್ಷಗಳು ಸಂಪೂರ್ಣವಾಗಿ ಸ್ವಜನ ಪಕ್ಷಪಾತದಲ್ಲಿ ಮುಳುಗಿವೆ. ನಾವು-ನಮಗೆ ಬೇಕಾದವರು ಎಂಬ ನೀತಿಯಡಿಯಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಡಿಸಿಎಂ; "ಸರಕಾರದ ಎಲ್ಲ ಹಂತಗಳಲ್ಲೂ ಸ್ವಜನ ಪಕ್ಷಪಾತ ವಿಜೃಂಭಿಸುತ್ತಿದೆ. ಆಡಳಿತದ ಎಲ್ಲ ಮಟ್ಟದಲ್ಲಿ, ಸರಕಾರಿ ಸಂಸ್ಥೆಗಳಲ್ಲಿ ಸರಕಾರವು ತನ್ನ ಪಕ್ಷದ ಕಾರ್ಯಕರ್ತರು, ನಾಯಕರನ್ನು ತುಂಬಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ" ಎಂದು ದೂರಿದರು.
ಜನತೆಯಿಂದ ಅಧಿಕಾರಕ್ಕೆ ಬಂದಿರುವ ಸರಕಾರವು ಜನಾದೇಶವನ್ನು ಮರೆತು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವುದು ಅತ್ಯಂತ ಬೇಸರದ ಸಂಗತಿ. ಜನರಿಗೆ ಹೇಳಿದ್ದು ಒಂದು, ಮಾಡಿದ್ದು ಇನ್ನೊಂದು. ಎಲ್ಲ ರೀತಿಯಲ್ಲೂ ಎಲ್‌ಡಿಎಫ್ ಸರಕಾರವ ಜನರಿಗೆ ವಿರುದ್ಧವಾಗಿ ಕೆಲಸ ಮಾಡಿದೆ. ಜನರಿಗೆ ಉದ್ಯೋಗ ನೀಡಬೇಕಿದ್ದ ಸರಕಾರ ತನ್ನ ಕಾರ್ಯಕರ್ತರಿಗೆ ಕೆಲಸ ಕೊಟ್ಟಿದೆ ಎಂದು ಡಾ.ಅಶ್ವತ್ಥನಾರಾಯಣ ಟೀಕಿಸಿದರು.
ಇದನ್ನೂ ಓದಿ - ಜನರಿಗೆ ಉಚಿತವಾಗಿ ಕೊರೊನಾ ಲಸಿಕೆ ವಿತರಿಸಲು ಮುಂದಾದ ಕೇರಳದ ಎಡರಂಗ ಸರ್ಕಾರ
ಸ್ವಜನ ಪಕ್ಷಪಾತ ಅದೆಷ್ಟರ ಮಟ್ಟಿಗೆ ಇದೆ ಎಂದರೆ, 'ಕೇರಳ ಪಬ್ಲಿಕ್ ಸರ್ವೀಸ್ ಕಮೀಷನ್' ಈಗ 'ಪಾರ್ಟಿ ಸರ್ವೀಸ್ ಕಮೀಷನ್' ಆಗಿಬಿಟ್ಟಿದೆ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಬೇಕಾದರವರನ್ನು ಸರಕಾರಿ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂದ ಅವರು; ಇದರಂದ ಅರ್ಹರಿಗೆ ಅನ್ಯಾಯವಾಗಿದೆ ಎಂದರು.
ಇಷ್ಟೆಲ್ಲ ವೈಫಲ್ಯಗಳನ್ನು ಕಂಡಿರುವ ಎಲ್‌ಡಿಎಫ್ ಸರಕಾರವನ್ನು ತೊಲಗಿಸಬೇಕಾಗಿದೆ. ಅಭಿವೃದ್ಧಿಗೆ ಮಾರಕವಾಗಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೂಟವನ್ನು ಸೋಲಿಸಬೇಕಾಗಿದೆ ಎಂದು ಇದೇ ಸಂದರ್ಭದಲ್ಲಿ ಡಾ.ಅಶ್ವತ್ಥನಾರಾಯಣ ಹೇಳಿದರು. ಚುನಾವಣಾ ನಿರ್ವಹಣಾ ಸಮಿತಿಯ ಮುಖ್ಯಸ್ಥರಾದ ಜಾರ್ಜ್ ಕುರಿಯನ್ ಈ ಸಂದರ್ಭದಲ್ಲಿ ಹಾಜರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.