ಈ ಬಾರಿ ಕೇರಳದಲ್ಲಿಲ್ಲ `ಓಣಂ` ಹಬ್ಬ
ರಾಜ್ಯಾದ್ಯಂತ ಓಣಂ ಸಾಂಸ್ಕೃತಿಕ ಆಚರಣೆಗಾಗಿ ಕೇರಳ ಸರ್ಕಾರ 30 ಕೋಟಿ ರೂಪಾಯಿ ಮೀಸಲಿರಿಸಿತ್ತು. ಈಗ ಈ ಹಣವನ್ನು ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ.
ತಿರುವನಂತಪುರ: ಹಿಂದೆಂದೂ ಕೇಳರಿಯದಂತಹ ಭೀಕರ ಪ್ರವಾಹದಿಂದ ಕೇರಳ ತತ್ತರಿಸಿದ್ದು, ಈ ಬಾರಿ ರಾಜ್ಯದಲ್ಲಿ ಓಣಂ ಆಚರಣೆಯನ್ನು ರದ್ದುಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಘೋಷಿಸಿದ್ದಾರೆ.
ಕೇರಳದ ಸುಗ್ಗಿ ಹಬ್ಬವಾದ ಓಣಂ ಅನ್ನು ಪ್ರತಿವರ್ಷ ರಾಜ್ಯಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಈ ವರ್ಷ ತಲೆದೋರಿರುವ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಓಣಂ ಆಚರಣೆಯನ್ನು ರದ್ದುಪದಿಸಲಾಗಿದ್ದು, ರಾಜ್ಯಾದ್ಯಂತ ಓಣಂ ಸಾಂಸ್ಕೃತಿಕ ಆಚರಣೆಗಾಗಿ ಮೀಸಲಿರಿಸಿದ್ದ 30 ಕೋಟಿ ರೂಪಾಯಿ ಹಣವನ್ನು ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ. ಆಗಸ್ಟ್ನಲ್ಲಿ ಒಂದು ವಾರ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಈ ಬಾರಿ ಆ.25ರಂದು ತಿರು ಓಣಂ ಇತ್ತು.
ಭೀಕರ ವಿಕೋಪ ಪರಿಸ್ಥಿತಿಯಿಂದಾಗಿ ಕೇರಳದ 444 ಗ್ರಾಮಗಳು ಹಾನಿಗೊಳಗಾಗಿದ್ದು, ಈವರೆಗೂ 39 ಮಂದಿ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಭಾರೀ ಮಳೆಯಿಂದಾಗಿ ಬಹುತೇಕ ಎಲ್ಲಾ ಆಣೆಕಟ್ಟುಗಳ ಬಾಗಿಲು ತೆರೆದಿದ್ದು, ವ್ಯಾಪಕ ಪ್ರಮಾಣದಲ್ಲಿ ಬೆಲೆ ಹಾಗೂ ಆಸ್ತಿಪಾಸ್ತಿ ನಾಶವಾಗಿದೆ.