ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ, ಪೋಲಿಸರಿಂದ ಜಲಫಿರಂಗಿ, ಅಶ್ರುವಾಯು ಪ್ರಯೋಗ
ಸಾಲ ಮನ್ನಾ, ಸಬ್ಸಿಡಿದರ ದಲ್ಲಿ ವಿದ್ಯುತ್ ಮತ್ತು ಇಂಧನ ಪೂರೈಕೆ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ಆಗ್ರಹಿಸಿ ರೈತರು ಕಿಸಾನ್ ಕ್ರಾಂತಿ ಪಾದಯಾತ್ರೆ ಮೂಲಕ ದೆಹಲಿಗೆ ಪ್ರವೇಶಿಸುತ್ತಿದ್ದಂತೆ ಪೊಲೀಸರು ರೈತರ ಮೇಲೆ,ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿ ರೈತರ ಮೇಲೆ ದಾಳಿ ಮಾಡಿದ್ದಾರೆ.
ನವದೆಹಲಿ: ಸಾಲ ಮನ್ನಾ, ಸಬ್ಸಿಡಿದರ ದಲ್ಲಿ ವಿದ್ಯುತ್ ಮತ್ತು ಇಂಧನ ಪೂರೈಕೆ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ಆಗ್ರಹಿಸಿ ರೈತರು ಕಿಸಾನ್ ಕ್ರಾಂತಿ ಪಾದಯಾತ್ರೆ ಮೂಲಕ ದೆಹಲಿಗೆ ಪ್ರವೇಶಿಸುತ್ತಿದ್ದಂತೆ ಪೊಲೀಸರು ರೈತರ ಮೇಲೆ,ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿ ರೈತರ ಮೇಲೆ ದಾಳಿ ಮಾಡಿದ್ದಾರೆ.
ಸಾವಿರಾರು ರೈತರು ಉತ್ತರಪ್ರದೇಶದಿಂದ ಪಾದಯಾತ್ರೆ ಮತ್ತು ಟ್ರಾಕ್ಟರ್ ಮೂಲಕ ದೆಹಲಿಗೆ ಆಗಮಿಸುತ್ತಿದ್ದಂತೆ ಪೊಲೀಸರು ಅವರನ್ನು ಬ್ಯಾರಿಕೇಡ್ ಗಳ ಮೂಲಕ ತಡೆಹಿಡಿದಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಆದರೆ ಪೊಲೀಸರು ಲಾಟಿಚಾರ್ಜ್ ಮತ್ತು ಅಶ್ರುವಾಯು ಮೂಲಕ ರೈತರನ್ನು ತಡೆ ಹಿಡಿದಿದ್ದಾರೆ.
ಪೂರ್ವ ದೆಹಲಿಯಲ್ಲಿ ಪೂರ್ವ ವಿಹಾರ್, ಜಗತ್ಪುರಿ, ಶಖರ್ಪುರ್, ಮಧು ವಿಹಾರ್, ಘಾಜಿಪುರ್, ಮಯೂರ್ ವಿಹಾರ್, ಮಂದಾವ್ಲಿ, ಪಾಂಡವ ನಗರ, ಕಲ್ಯಾಣ ಪುರಿ ಮತ್ತು ಹೊಸ ಅಶೋಕ್ ನಗರ ಪ್ರದೇಶಗಳಿಗೆ ಅನ್ವಯವಾಗುವ ರೀತಿಯಲ್ಲಿ ಒಂದು ವಾರದ ಅವಧಿಯ ನಿಷೇಧಾಜ್ಞೆಯನ್ನು ಹೊರಡಿಸಿದ್ದಾರೆ. ಈ ಪ್ರದೇಶದ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಗಳು, ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆ ಮತ್ತು ಆಂಪ್ಲಿಫೈಯರ್ಗಳು ಮತ್ತು ಧ್ವನಿವರ್ಧಕಗಳ ಬಳಸಲು ಅನುಮತಿ ನೀಡಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ಪೋಲೀಸರ ನಿರ್ಧಾರವನ್ನು ಖಂಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ರೈತರಿಗೆ ದೆಹಲಿಯಲ್ಲಿ ಪ್ರವೇಶಿಸಲು ಅವಕಾಶ ನೀಡಬೇಕೆಂದು ಹೇಳಿದರು. "ಅವರು ದೆಹಲಿಯನ್ನು ಪ್ರವೇಶಿಸಲು ಅನುಮತಿ ನಿಡುತ್ತಿಲ್ಲವೇಕೆ? ಇದು ತಪ್ಪು, ನಾವು ರೈತರೊಂದಿಗೆ ಇದ್ದೇವೆ" ಎಂದು ಹೇಳಿದರು.
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಹ ರೈತರ ರ್ಯಾಲಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. "ರೈತರಿಗೆ ನೀಡಿದ್ದ ಭರವಸೆಯನ್ನು ಈ ಸರಕಾರ ಪೂರೈಸಲಿಲ್ಲ, ಆದ್ದರಿಂದ ರೈತರ ಪ್ರತಿಭಟನೆ ಸಹಜ ಅದ್ದರಿಂದ ನಾವು ಸಂಪೂರ್ಣವಾಗಿ ರೈತರಿಗೆ ಬೆಂಬಲ ನೀಡುತ್ತೇವೆ" ಎಂದು ಅವರು ಹೇಳಿದರು.