ದೆಹಲಿಯಲ್ಲಿ ಮತ್ತೊಮ್ಮೆ ಮೊಳಗಲಿದೆ ರೈತರ ಮಾರ್ದನಿ
ಅಖಿಲ ಭಾರತ ಕಿಸಾನ್ ಮುಕ್ತಿ ಮೋರ್ಚಾದಿಂದ ಬೃಹತ್ ರ್ಯಾಲಿಗೆ ಕರೆ ನೀಡಿದ್ದು ನೂರಕ್ಕೂ ಅಧಿಕ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ನವದೆಹಲಿ: ದೇಶದ ಅನ್ನದಾತರು ಇಂದು ದೆಹಲಿಯಲ್ಲಿ ಮತ್ತೆ ಬೀದಿಗಿಳಿಯಲಿದ್ದಾರೆ. ರೈತ ಸಾಲ ಮನ್ನಾ, ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಹಾಗೂ ವಿಶೇಷ ಸಂಸತ್ ಅಧಿವೇಶನ ಕರೆದು ರೈತ ಸಮಸ್ಯೆಗಳ ಕುರಿತು ಚರ್ಚಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಅಖಿಲ ಭಾರತ ಕಿಸಾನ್ ಮುಕ್ತಿ ಮೋರ್ಚಾದಿಂದ ಬೃಹತ್ ರ್ಯಾಲಿಗೆ ಕರೆ ನೀಡಿದ್ದು ನೂರಕ್ಕೂ ಅಧಿಕ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಇಂದು ದೆಹಲಿಗೆ ಬಂದು ಜಮಾವಣೆಗೊಳ್ಳುವ ರೈತರು ನಾಳೆ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ರೈತರು ಭಾಗಿಯಾಗಲಿದ್ದಾರೆ. ದೆಹಲಿಯ ವಿವಿಧ ರಸ್ತೆಗಳಲ್ಲಿ ಬೃಹತ್ ರ್ಯಾಲಿ ನಡೆಸಿ ರಾಮಲೀಲಾ ಮೈದಾನವನ್ನು ತಲುಪಲಿದ್ದು ಅಲ್ಲಿ ತಮ್ಮ ಹಕ್ಕೊತ್ತಾಯ ಮಂಡಿಸಿಲಿದ್ದಾರೆ. ಕರ್ನಾಟಕದಿಂದಲೂ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ದೆಹಲಿಯ ಹೊರ ಭಾಗದಲ್ಲಿ ರೈತ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ಮಾಡಲಾಗಿತ್ತು. ಈಗ ಲೋಕಸಭೆ ಚುನಾವಣೆ ಸನಿಹದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ ಸೂಕ್ತ ಭದ್ರತೆ ಒದಗಿಸಲಾಗಿದೆ.