ಆನ್ ಲೈನ್ ವಹಿವಾಟು ಮಾಡುವಾಗ ಈ ಅಂಶಗಳ ಬಗ್ಗೆ ಹೆಚ್ಚು ಗಮನಹರಿಸಿ...
ಭಾರತೀಯ ಸ್ಟೇಟ್ ಬ್ಯಾಂಕ್ ಆನ್ ಲೈನ್ ವಹಿವಾಟು ಮಾಡುವಾಗ ಗ್ರಾಹಕರು ಗಮನಹರಿಸಬೇಕಾದ 10 ಅಂಶಗಳ ಬಗ್ಗೆ ತಿಳಿಸಿದೆ.
ನವದೆಹಲಿ: ದೇಶದಲ್ಲಿ ನೋಟು ಅಮಾನ್ಯೀಕರಣವಾದ ಬಳಿಕ ಆನ್ ಲೈನ್ ಶಾಪಿಂಗ್, ಆನ್ ಲೈನ್ ವಹಿವಾಟು ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಆನ್ ಲೈನ್ ಅಥವಾ ಡಿಜಿಟಲ್ ವಹಿವಾಟು ಮಾಡುವಾಗ ಗ್ರಾಹಕರು ಕೆಲವೊಂದು ಅಂಶಗಳ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆ. ಹಾಗೆಯೇ ಈ ವಹಿವಾಟು ಮಾಡುವಾಗ ಹೆಚ್ಚು ಸಂಯಮವೂ ಮುಖ್ಯ. ಇಲ್ಲವಾದರೆ ನಿಮ್ಮ ಹಣ ಮತ್ಯಾರಿಗೋ ತಲುಪುವ ಅಥವಾ ನಿಮ್ಮ ಅಕೌಂಟ್ ಹ್ಯಾಕ್ ಆಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಆನ್ ಲೈನ್ ವಹಿವಾಟು ಮಾಡುವಾಗ ಗ್ರಾಹಕರು ಗಮನಹರಿಸಬೇಕಾದ 10 ಅಂಶಗಳ ಬಗ್ಗೆ ತಿಳಿಸಿದೆ.
1. ಸಾರ್ವಜನಿಕ ಸ್ಥಳಗಳಲ್ಲಿ ಇರುವ ಕಂಪ್ಯೂಟರ್ ಅಥವಾ ಇತರ ಸಾಧನಗಳ ಮೂಲಕ ಆನ್ ಲೈನ್ ವಹಿವಾಟು ಮಾಡಬೇಡಿ. ನಿಮ್ಮಗೆ ನಂಬಿಕೆಯಿರುವ, ಸುರಕ್ಷಿತವಾದ ಅಥವಾ ನಿಮ್ಮ ಸ್ವಂತ ಮೊಬೈಲ್ ಅಥವಾ ಲ್ಯಾಪ್ ಟಾಪ್ ಬಳಸಿ ವಹಿವಾಟು ಮಾಡಿ.
2. ನಿಮಗೆ ತಿಳಿದಿರುವ ವೆಬ್ ಸೈಟ್ ಗಳಲ್ಲಿ ಮಾತ್ರ ಆನ್ಲೈನ್ ಶಾಪಿಂಗ್ ಅಥವಾ ವಹಿವಾಟು ನಡೆಸಿ. 'https' ಇರುವ ಸುರಕ್ಷಿತ ವೆಬ್ಸೈಟ್ ಗಳಲ್ಲಿ ಮಾತ್ರ ಹಣಕಾಸಿನ ವಹಿವಾಟು ನಡೆಸಿ. 'Http: //' ನೊಂದಿಗೆ ವೆಬ್ಸೈಟ್ URL ಪ್ರಾರಂಭವಾಗಿದ್ದರೆ, ಅದರಲ್ಲಿ ನಿಮ್ಮ ಡೇಟಾವನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.
3. ಪರಿಶೀಲಿಸಲಾದ ಮತ್ತು ವಿಶ್ವಾಸಾರ್ಹ ಬ್ರೌಸರ್ ಗಳನ್ನು ಮಾತ್ರ ಬಳಸಿ.
4. ಆನ್ಲೈನ್ ವಹಿವಾಟು ಮಾಡುವಾಗ ಯಾವಾಗಲೂ ಒನ್ ಟೈಮ್ ಪಾಸ್ವರ್ಡ್ (OTP) ಆಯ್ಕೆಯನ್ನು ಆರಿಸಿ.
5. ಪಾಸ್ವರ್ಡ್ಗ, OTP, PIN ಗಳು, ಕಾರ್ಡ್ ಪರಿಶೀಲನಾ ಕೋಡ್ಗಳನ್ನು ಯಾವುದೇ ಕಾರಣಕ್ಕೂ ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬೇಡಿ.
6. ಉತ್ತಮವಾದ Anti Virus software ಬಳಸಿ. ಇದರಿಂದ ನಿಮ್ಮ ಅಂತರ್ಜಾಲ ಸಂಪರ್ಕ ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಆಗಾಗ್ಗೆ ಸಂದೇಶಗಳನ್ನು ಪಡೆಯಬಹುದು.
7. ಎಲ್ಲಾ ಖಾತೆಗಳಿಗೆ ಒಂದೇ ಪಾಸ್ವರ್ಡ್ ನೀಡಬೇಡಿ. ಬೇರೆ ಬೇರೆ ಪಾಸ್ವರ್ಡ್ ನೀಡಿ. ಆದಷ್ಟು ಕಷ್ಟಕರವಾದ ಪಾಸ್ವರ್ಡ್ ಹೊಂದುವುದರಿಂದ ಇತರರು ನಿಮ್ಮ ಖಾತೆ ವಿವರಗಳನ್ನು ಸುಲಭವಾಗಿ ಕದಿಯಲು ಸಾಧ್ಯವಾಗುವುದಿಲ್ಲ.
8. ಪಾಸ್ವರ್ಡ್ ಮರುಪಡೆಯುವಿಕೆಗಾಗಿ ಸ್ಮಾರ್ಟ್ ವಿಧಾನಗಳನ್ನು ಬಳಸಿ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ನಿಮ್ಮ ಪಾಸ್ವರ್ಡ್ ಅನ್ನು ಬದಲಿಸಿ. ಫೋನ್ನಲ್ಲಿ ಅಥವಾ ಕಾಗದದ ಮೇಲೆ ಮೂಲಕ ಬರೆಯುವ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ನೀಡಬೇಡಿ.
9. ಫಿಶಿಂಗ್ ಇಮೇಲ್ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ ಮತ್ತು ಇಮೇಲ್ ಗಳಲ್ಲಿ ಬರುವ ಲಾಟರಿ ವಿಜಯದ ಮಾಹಿತಿಗಳು ವಿಶ್ವಾಸಾರ್ಹವಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಅವುಗಳಿಗೆ ಪ್ರತಿಕ್ರಿಯಿಸಿ ನಿಮ್ಮ ಖಾತೆಯ ವಿವರ ನೀಡಬೇಡಿ.
10. ಅಪರಿಚಿತ ಸೈಟ್ಗಳಿಂದ ಡೌನ್ಲೋಡ್ ಮಾಡುವುದನ್ನು ನಿಲ್ಲಿಸಿ. ಯಾವುದೇ ಅಪರಿಚಿತ ಸೈಟ್ನಿಂದ ಮಾಡಲಾದ ಡೌನ್ಲೋಡ್ಗಳು ವೈರಸ್ಗಳು ಅಥವಾ ಮಾಲ್ವೇರ್ಗಳನ್ನು ಒಳಗೊಂಡಿರಬಹುದು. ಹಾಗಾಗಿ ಈ ಬಗ್ಗೆ ಹೆಚ್ಚು ಗಮನಹರಿಸಿ.