ನವದೆಹಲಿ: ಕ್ಯಾರ್ ಚಂಡಮಾರುತವು ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಶನಿವಾರ ಎಚ್ಚರಿಸಿದೆ. ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಒಳ ಭಾಗಗಳ ಮೇಲೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

'ಮುಂದಿನ 24 ಗಂಟೆಗಳ ಅವಧಿಯಲ್ಲಿ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಸಮುದ್ರದ ಸ್ಥಿತಿಯು ತುಂಬಾ ಎತ್ತರಕ್ಕೇರುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಇದು ಉತ್ತರ ಕರ್ನಾಟಕ ಕರಾವಳಿಯುದ್ದಕ್ಕೂ ಮತ್ತು ಹೊರಗಡೆ ತೀವ್ರವಾಗಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. 



ಕ್ಯಾರ್ ಚಂಡಮಾರುತವು ಶುಕ್ರವಾರ ಸಂಜೆ ರತ್ನಾಗಿರಿಯ ಪಶ್ಚಿಮಕ್ಕೆ ಸುಮಾರು 190 ಕಿ.ಮೀ ಮತ್ತು ಮಹಾರಾಷ್ಟ್ರದ ಮುಂಬೈಯ ನೈರುತ್ಯ ದಿಕ್ಕಿನಲ್ಲಿ 330 ಕಿ.ಮೀ. ದೂರದಲ್ಲಿತ್ತು, ಈಗ ಅದು ಮುಂಬರುವ ಐದು ದಿನಗಳಲ್ಲಿ ಪಶ್ಚಿಮ-ಉತ್ತರದಿಂದ ಪಶ್ಚಿಮಕ್ಕೆ ಓಮನ್ ಕರಾವಳಿಯತ್ತ ಸಾಗುವ ಸಾಧ್ಯತೆಯಿದೆ ಎನ್ನಲಾಗಿದೆ.


ಏತನ್ಮಧ್ಯೆ, ಪೂರ್ವ-ಮಧ್ಯ ಅರೇಬಿಯನ್ ಸಮುದ್ರದಲ್ಲಿ ಕೇಂದ್ರೀಕೃತವಾಗಿರುವ ಕ್ಯಾರ್ ಚಂಡಮಾರುತದ ಹಿನ್ನೆಲೆಯಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಶನಿವಾರ ಶೋಧ ಮತ್ತು ಪಾರುಗಾಣಿಕಾ (ಎಸ್‌ಎಆರ್) ಯ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಈಗ ಕರ್ನಾಟಕ-ಗೋವಾ ಕರಾವಳಿಯಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಹಡಗುಗಳಾದ  ಸಮುದ್ರ ಪ್ರಹಾರಿ, ಅಮಲ್, ಅಪೂರ್ವಾ, ಅಮರ್ತ್ಯ ಮತ್ತು ರಾಜ್‌ದೂತ್ ಬೀಡು ಬಿಟ್ಟಿವೆ.


ಮುಂದಿನ 24 ಗಂಟೆಗಳಲ್ಲಿ ಮಹಾರಾಷ್ಟ್ರ-ಗೋವಾ-ಕರ್ನಾಟಕ ಕರಾವಳಿ ಮತ್ತು ಈಶಾನ್ಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ದಕ್ಷಿಣ ಗುಜರಾತ್ ಕರಾವಳಿಯುದ್ದಕ್ಕೂ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.