ಲಾಲೂ ಪ್ರಸಾದ್ ಕುಟುಂಬದ ಮೇಲೆ ಐಶ್ವರ್ಯಾ ರಾಯ್ ಕಿರುಕುಳ ಆರೋಪ
ತೇಜ್ ಪ್ರತಾಪ್ ಪತ್ನಿ ಹಾಗೂ ಲಾಲೂ ಪ್ರಸಾದ್ ಸೊಸೆಯಾಗಿರುವ ಐಶ್ವರ್ಯ ರಾಯ್ ಅವರು ತಮಗೆ ಯಾದವ್ ಕುಟುಂಬ ಕಿರುಕುಳ ನೀಡಿ ಹೊರಗೆ ಎಸೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನವದೆಹಲಿ: ತೇಜ್ ಪ್ರತಾಪ್ ಪತ್ನಿ ಹಾಗೂ ಲಾಲೂ ಪ್ರಸಾದ್ ಸೊಸೆಯಾಗಿರುವ ಐಶ್ವರ್ಯ ರಾಯ್ ಅವರು ತಮಗೆ ಯಾದವ್ ಕುಟುಂಬ ಕಿರುಕುಳ ನೀಡಿ ಹೊರಗೆ ಎಸೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಡ ರಾತ್ರಿ ನಡೆದ ನಾಟಕೀಯ ಬೆಳವಣಿಗೆ ನಂತರ ಪೋಲಿಸರ ಮಧ್ಯಸ್ಥಿಕೆಯಿಂದಾಗಿ ಮನೆಯೊಳಗೆ ಹೋಗಬೇಕಾಯಿತು. ನಿನ್ನೆ ಇಡೀ ದಿನ, ಲಾಲು ಯಾದವ್ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಅವರ ಪತ್ನಿ ಐಶ್ವರ್ಯಾ ರಾಯ್ ಅವರು ಯಾದವ್ ಮನೆಯ ಆವರಣದಲ್ಲಿರುವ ಶೆಡ್‌ನಿಂದ ಮಾಧ್ಯಮಗಳೊಂದಿಗೆ ಮಾತನಾಡಿದ್ದರು ಮತ್ತು ಅವರ ಕುಟುಂಬಸ್ಥರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು. ಮಾಜಿ ಮುಖ್ಯಮಂತ್ರಿಯಾಗಿದ್ದ ತನ್ನ ಅತ್ತೆ ರಾಬ್ರಿ ದೇವಿ ಅವರನ್ನು ಮನೆಯಿಂದ ಹೊರಗೆ ಎಸೆದಿದ್ದಾರೆ ಎಂದು ಅವರು ಆರೋಪಿಸಿದರು ಮತ್ತು ಅವರ ಅತ್ತಿಗೆ ಮಿಸಾ ಭಾರತಿ ಅವರು ತಮ್ಮ ವಿವಾಹ ಮುರಿದು ಬಿಳಲು ಕಾರಣ ಎಂದು ಆರೋಪಿಸಿದರು.
ಆದರೆ ಆರ್‌ಜೆಡಿ ರಾಜ್ಯಸಭಾ ಸದಸ್ಯೆ ಮಿಸಾ ಭಾರತಿ ಈ ಆರೋಪಗಳನ್ನು ನಿರಾಕರಿಸಿದ್ದಾರೆ. 'ನಾನು ಅಲ್ಲಿ ಹೆಚ್ಚಾಗಿ ವಾಸಿಸುತ್ತಿಲ್ಲ ಆದರೂ ತಮ್ಮನ್ನು ಅನಗತ್ಯವಾಗಿ ಇಡೀ ವಿವಾದಕ್ಕೆ ತರಲಾಗುತ್ತದೆ. ಆದರೆ ಪ್ರತಿ ಗಂಡ-ಹೆಂಡತಿ ವಿವಾದದಲ್ಲಿಯೂ ಅತ್ತಿಗೆಯನ್ನು ಎಳೆಯಲಾಗುತ್ತದೆ ಎಂಬುದು ಸಾಮಾನ್ಯವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ನಾನು ಅಷ್ಟೇನೂ ಹೋಗಿರಲಿಲ್ಲ, ಪಾಟ್ನಾಗೆ ಕೋರ್ಟ್ ಪ್ರಕರಣದ ವಿಚಾರವಾಗಿ ಮೂರು- ನಾಲ್ಕುಬಾರಿ ಹೋಗಿದ್ದೆ. ಆದ್ದರಿಂದ ನನ್ನ ವಿರುದ್ಧದ ಆರೋಪಗಳು ಸತ್ಯದಿಂದ ದೂರವಾಗಿವೆ 'ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಐಶ್ವರ್ಯಾ ರಾಯ್ ಅವರು ತಮ್ಮ ಪತಿಯ ವಿಚ್ಚೇದನದ ಮೊಕದ್ದಮೆಯ ಹೊರತಾಗಿಯೂ ರಾಜಿ ಮಾಡಿಕೊಳ್ಳಬೇಕೆಂದು ಆಶಿಸುತ್ತಾ ತನ್ನ ಅವರ ಕುಟುಂಬಸ್ಥರೊಂದಿಗೆ ವಾಸಿಸುತ್ತಿರುವುದಾಗಿ ಹೇಳಿದ್ದರು. ಕಳೆದ ವರ್ಷ ಮೇನಲ್ಲಿ ನಡೆದ ವಿವಾಹದ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಿಸಾ ಭಾರತಿ ತಮ್ಮ ಸಹೋದರರಾದ ತೇಜಶ್ವಿ ಮತ್ತು ತೇಜ್ ಪ್ರತಾಪ್ ನಡುವೆ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. 2017 ರ ಡಿಸೆಂಬರ್‌ನಿಂದ ಭ್ರಷ್ಟಾಚಾರದ ಪ್ರಕರಣದಿಂದಾಗಿ ಜೈಲಿನಲ್ಲಿರುವ ಮಾವ ಲಾಲು ಪ್ರಸಾದ್ ಯಾದವ್ ಅವರು ಈ ವಿವಾದವನ್ನು ಬಗೆಹರಿಸಬಹುದಿತ್ತು ಎಂದು ಅವರು ಹೇಳಿದರು.
ಕಳೆದ ಮೂರು ತಿಂಗಳುಗಳಿಂದ, ತನ್ನ ಅತ್ತಿಗೆ ಮಿಸಾ ಭಾರತಿಯ ಸೂಚನೆಯ ಮೇರೆಗೆ ಆಕೆಗೆ ಊಟ ನೀಡಲಾಗಿಲ್ಲ ಮತ್ತು ಆಕೆಯ ಪೋಷಕರು ಕಳುಹಿಸಿದ ಆಹಾರದ ಮೇಲೆ ಬದುಕುಳಿದಿದ್ದಾಳೆ ಎಂದು ಅವರು ಹೇಳಿದ್ದಾರೆ. ಭಾನುವಾರ ಮಧ್ಯಾಹ್ನ ಆಕೆಗೆ ಅಡುಗೆ ಮನೆಗೆ ಪ್ರವೇಶಿಸಲು ಅವಕಾಶವಿಲ್ಲದಿದ್ದಾಗ ಈ ವಿವಾದ ಸ್ಪೋಟಗೊಂಡಿತು ಎನ್ನಲಾಗಿದೆ. ತದನಂತರ ಅವರು ಮನೆಹೊರಗೆ ಬಂದು ಮಹಿಳಾ ಸಹಾಯವಾಣಿಗೆ ಕರೆ ಮಾಡಿದರು ಎನ್ನಲಾಗಿದೆ.
'ಮಿಸಾ ನಿಯಮಿತವಾಗಿ ನನ್ನೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಳು, ಕಿರುಕುಳ ನೀಡುತ್ತಿದ್ದಳು ಮತ್ತು ಕಳೆದ ಶನಿವಾರ ಅವಳು ಮತ್ತೆ ನನ್ನನ್ನು ಹಿಂಸಿಸಿದಳು ಮತ್ತು ರಾಬ್ರಿ ದೇವಿಯ ಸಮ್ಮುಖದಲ್ಲಿ ನನ್ನನ್ನು ಮನೆಯಿಂದ ಹೊರಗೆ ಎಸೆದಳು ಎಂದು ಐಶ್ವರ್ಯ ರಾಯ್ ಅವರು ಆರೋಪಿಸಿದ್ದಾರೆ.