ಹುಬ್ಬಳ್ಳಿ: ರಾಜ್ಯಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ  ಭೂಕುಸಿತ ಸಂಭವಿಸಿದ್ದು, ನೈಋತ್ಯ ರೈಲ್ವೆ ಸೇವೆಗಳ ಮೇಲೆ ಭಾರೀ ಪರಿಣಾಮ ಬೀರಿದೆ. 


COMMERCIAL BREAK
SCROLL TO CONTINUE READING

ರೈಲ್ವೆ ಮಾರ್ಗಗಳಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಕೆಲವು ರೈಲುಗಳನ್ನು ರದ್ದುಪಡಿಸಲಾಗಿದ್ದು, ಉಳಿದ ರೈಲುಗಳ ಸಂಚಾರವನ್ನು ಮರುನಿಗದಿಗೊಳಿಸಲಾಗಿದೆ.  ಮಂಗಳವಾರ ಹುಬ್ಬಳ್ಳಿ ವಿಭಾಗದ ಲೋಂಡಾ - ತಿನೈಘಾಟ್ ನಿಲ್ದಾಣಗಳ ನಡುವೆ ಎರಡು ರೈಲುಗಳ ಸಂಚಾರವನ್ನು ಮರು ನಿಗದಿಪಡಿಸಲಾಗಿದ್ದು, ಕೆಲವು ಮಾರ್ಗಗಳಲ್ಲಿ ಭಾಗಶಃ ರದ್ದುಗೊಂಡಿದೆ. 


ಇಂದು ಸಂಜೆ 4: 15 ಕ್ಕೆ ಹುಬ್ಬಳ್ಳಿಯಿಂದ ಹೊರಡಬೇಕಿದ್ದ ರೈಲು ಸಂಖ್ಯೆ 17305 ಹುಬ್ಬಳ್ಳಿ- ಹಜರತ್ ನಿಜಾಮುದ್ದೀನ್ ಲಿಂಕ್ ಎಕ್ಸ್‌ಪ್ರೆಸ್, ನಾಳೆ ಬೆಳಿಗ್ಗೆ 12.30 ಕ್ಕೆ ನಿರ್ಗಮಿಸಲು ಮರುನಿಗದಿಪಡಿಸಲಾಗಿದೆ. ಇಂದು ಸಂಜೆ 7 ಗಂಟೆಗೆ ಲೊಂಡಾದಿಂದ ಹೊರಡಬೇಕಿದ್ದ ರೈಲು ಸಂಖ್ಯೆ 12779 ವಾಸ್ಕೋ- ಡಾ-ಗಾಮಾ - ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ನಾಳೆ ಬೆಳಿಗ್ಗೆ 2.30ಕ್ಕೆ ಹೊರಡಲಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ. 


ಮಹಾರಾಷ್ಟ್ರದಲ್ಲಿ ಎಡಬಿಡದೆ ಸುರಿಯುತಿರುವ ಭಾರೀ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿದ್ದು, ನೀರನ್ನುಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಮವಾರ ಪ್ರವಾಹಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.