ನವದೆಹಲಿ : ಈ ತಿಂಗಳಲ್ಲಿ ಉಡಾವಣೆಯಾಗಬೇಕಿದ್ದ ಇಸ್ರೋದ ಮಹತ್ವಾಕಾಂಕ್ಷೆಯ 'ಚಂದ್ರಯಾನ-2' ಉಡಾವಣೆಯನ್ನು ಅಕ್ಟೋಬರ್-ನವೆಂಬರ್ ತಿಂಗಳಿಗೆ ಮುಂದೂಡಿರುವುದಾಗಿ ಇಸ್ರೋ ಅಧ್ಯಕ್ಷ ಕೆ.ಶಿವನ್ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಸಂಬಂಧ ಇಂದು ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರಿಗೆ ತಿಳಿಸಿರುವುದಾಗಿ ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದ್ದು, ‘ರಾಷ್ಟ್ರ ಮಟ್ಟದ ಪರಿಶೀಲನಾ ಸಮಿತಿ ಇತ್ತೀಚೆಗೆ ಭೇಟಿಯಾಗಿ ಹೆಚ್ಚುವರಿ ಪರೀಕ್ಷೆಗಳನ್ನು ನಡೆಸುವುದರ ಬಗ್ಗೆ ಸಲಹೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಯೋಜನೆ ಮುಂದೂಡಲ್ಪಟ್ಟಿದೆ’ ಎಂದು ಅವರು ಹೇಳಿದ್ದಾರೆ.


2008ರಲ್ಲಿ, ಉಡಾವಣೆ ಮಾಡಲಾಗಿದ್ದ ಚಂದ್ರಯಾನ-1 ಚಂದ್ರನ ಅಂಗಳದಲ್ಲಿ ನೀರು ಇರುವ ಬಗ್ಗೆ ಪತ್ತೆ ಮಾಡಿತ್ತು. ಇದೀಗ ಮೊದಲ ಚಂದ್ರಯಾನದ 10 ವರ್ಷಗಳ ಬಳಿಕ ಇಸ್ರೊ ಅಂತದ್ದೇ ಮತ್ತೊಂದು (ಚಂದ್ರಯಾನ್‌-2) ಸಾಹಸಕ್ಕೆ ಸಿದ್ಧತೆ ನಡೆಸಿದೆ. ಇಸ್ರೊ 'ಚಂದ್ರಯಾನ-2' ಯೋಜನೆಯ ಭಾಗವಾಗಿ ಚಂದ್ರನ ಮೇಲೆ ಮಾನವರಹಿತ ವಾಹನವನ್ನು (ರೋವರ್‌) ಇಳಿಸಲಿದೆ. ಇದರಿಂದಾಗಿ ಚಂದ್ರನ ಮೇಲ್ಮೈ ಅನ್ನು ಮತ್ತಷ್ಟು ಹತ್ತಿರದಿಂದ ಮತ್ತು ಸೂಕ್ಷ್ಮವಾಗಿ ಅಧ್ಯಯನ ನಡೆಸಲು ಸಾಧ್ಯವಾಗಲಿದೆ.