ಅಂಬಿಕಾಪುರ: ಕಾಂಗ್ರೆಸ್ ವಿರುದ್ಧ ಮತ್ತೊಮ್ಮೆ ತೀವ್ರ ವಾಗ್ದಾಳಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಬೇರೆಯವರನ್ನು ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಮಾಡಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ. 


COMMERCIAL BREAK
SCROLL TO CONTINUE READING

ಛತ್ತೀಸ್ಘಡದ ಅಂಬಿಕಾಪುರದಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಇದುವರೆಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಗಾಂಧಿ ಕುಟುಂಬದವರನ್ನೇ ಆಯ್ಕೆ ಮಾಡಲಾಗುತ್ತಿದೆ. ಗಾಂಧಿ ಕುಟುಂಬದ ಹೊರಗಿನ ಕೆಲ ಒಳ್ಳೆಯ ನಾಯಕರನ್ನು ಪಕ್ಷದ ರಾಷ್ಟ್ರಾಧ್ಯಕ್ಷರನ್ನಾಗಿ ಕನಿಷ್ಟ ಐದು ವರ್ಷಗಳ ಕಾಲ ನೇಮಕ ಮಾಡಿ ತೋರಿಸಿರಿ. ಹಾಗೆ ಮಾಡಿದರೆ ನಾನು ನೆಹರೂ ನಿಜವಾಗಿಯೂ ಇಲ್ಲಿ ಒಳ್ಳೆಯ ಪ್ರಜಾಪ್ರಭುತ್ವ ವ್ಯವಸ್ಥೆ ರಚಿಸಿದ್ದರೆಂದು ನಂಬುತ್ತೇನೆ" ಎಂದು ಸವಾಲು ಹಾಕಿದರು.



ಕಾಂಗ್ರೆಸ್ ನ ನಾಲ್ಕು ತಲೆಮಾರು ದೇಶವನ್ನು ಆಳಿದೆ. ಆದರೆ ದೇಶಕ್ಕೆ ತಾವೇನನ್ನು ನೀಡಿದ್ದೇವೆ ಎನ್ನುವುದನ್ನು ಅವರು ಹೇಳಬೇಕು. ದೆಹಲಿ ಕೆಂಪುಕೋಟೆಯ ಅಖಾಡದಿಂದ ಮಾತನಾಡಲು ಕೇವಲ ಒಂದೇ ಕುಟುಂಬಕ್ಕೆ ಹಕ್ಕಿದೆ ಎನ್ನುವ ಅವರ ನಿಲುವನ್ನು ಜನರು ಈಗಾಗಲೇ ವಿರೋಧಿಸಿದ್ದಾರೆ. ಕಾಂಗ್ರೆಸ್ ಪಕ್ಷವು ತಮ್ಮ ಮನಸ್ಸಿನಲ್ಲಿ ಬೇರು ಬಿಟ್ಟಿರುವ ಸುಳ್ಳಿನ ಕಥೆಗಳನ್ನೇ ಹೇಳಿ ದೇಶವನ್ನು ಕತ್ತಲಲ್ಲಿರಿಸಿದೆ. ದೇಶದ ಬಡವರು ಎಂತಹಾ ಕಠಿಣ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವ ಅಲ್ಪ ಜ್ಞಾನವೂ ಕಾಂಗ್ರೆಸ್ ಗೆ ಇಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.