ಕೇಂದ್ರ ಸರ್ಕಾರ ಸುಪ್ರೀಂ ಆದೇಶವನ್ನು ನಿರಾಕರಿಸಿರುವುದು ಇತಿಹಾಸದಲ್ಲೇ ಮೊದಲು: ದೆಹಲಿ ಸಿಎಂ
ಕೇಂದ್ರ ಸರ್ಕಾರದ ಸರ್ವಾಧಿಕಾರ ದೋರಣೆ, ಅರಾಜಕತೆಗೆ ಕಾರಣವಾಗಲಿದೆ- ಅರವಿಂದ್ ಕೇಜ್ರಿವಾಲ್
ನವದೆಹಲಿ: ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಬಹಿರಂಗವಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಲು ನಿರಾಕರಿಸಿದೆ. ಇದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ದೋರಣೆಯಾಗಿದ್ದು, ಅರಾಜಕತೆಗೆ ಕಾರಣವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಭೇಟಿ ಮಾಡಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. LG ಅವರು ಸೇವಾ ಇಲಾಖೆಗಳನ್ನು ಚುನಾಯಿತ ಸರ್ಕಾರದ ಅಧಿನಕ್ಕೆ ಕೊಡಲು ಒಪ್ಪುತ್ತಿಲ್ಲ ಮತ್ತು ಕೋರ್ಟ್ ಆದೇಶದ ನಂತರವೂ ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದ ಸಲಹೆ ಪಡೆದಿದ್ದಾರೆ ಎಂದು ಆರೋಪಿಸಿದರು.
ಸರ್ವೋಚ್ಚ ನ್ಯಾಯಾಲಯ ಪೊಲೀಸ್, ಭೂ ಮತ್ತು ಸಾರ್ವಜನಿಕ ಆದೇಶ ಹೊರತುಪಡಿಸಿ ಇತರೆ ವಿಷಯಗಳಲ್ಲಿ ದೆಹಲಿ ಸರ್ಕಾರ ಕಾರ್ಯನಿರ್ವಾಹಕ ಅಧಿಕಾರ ಹೊಂದಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಲೆಫ್ಟಿನೆಂಟ್ ಗವರ್ನರ್ ಅವರು ಸೇವಾ ಇಲಾಖೆಗಳನ್ನು ಸರ್ಕಾರ ಅಧಿನಕ್ಕೆ ಕೊಡಲು ಒಪ್ಪುತ್ತಿಲ್ಲ ಎಂದು ದೆಹಲಿ ಸಿಎಂ ದೂರಿದರು.
ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವೆ ಅಧಿಕಾರ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು, ಸಂವಿಧಾನವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ. ನಿರಂಕುಶವಾದ ಮತ್ತು ಅರಾಜಕತೆಗೆ ಸಂವಿಧಾನದಲ್ಲಿ ಜಾಗವಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಂಬಂಧ ಸೌಹಾರ್ದಯುತವಾಗಿ, ಆರೋಗ್ಯಕರವಾಗಿರಬೇಕು. ಲೆಫ್ಟಿನೆಂಟ್ ಗವರ್ನರ್ ರಾಜ್ಯದೊಂದಿಗೆ ಆರೋಗ್ಯಯುತ ಸಂಬಂಧ ಹೊಂದಿದ್ದು, ಸೌಹಾರ್ದತೆಯಿಂದ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಹೊಂದಾಣಿಕೆ ಅಗತ್ಯ ಎಂದು ಹೇಳಿತ್ತು.