Field marshal KM Cariappa : ಜನವರಿ 28, ಭಾರತೀಯ ಸೇನೆಯ ಪ್ರಥಮ ಮಹಾದಂಡನಾಯಕರಾದ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ ಕಾರ್ಯಪ್ಪ ಅವರ ಜಯಂತಿಯಾಗಿದೆ. ಭಾರತದ ರಾಷ್ಟ್ರೀಯ ಹೀರೋ ಎಂದೇ ಖ್ಯಾತರಾಗಿರುವ ಕಾರ್ಯಪ್ಪನವರು, ವಸಾಹತುಶಾಹಿ ಆಡಳಿತದಡಿಯಲ್ಲಿದ್ದ ಭಾರತೀಯ ಸೇನೆಯನ್ನು ಸ್ವತಂತ್ರ ಭಾರತದ ಸೇನೆಯಾಗಿ ಮಾರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ಸೇನೆಗೆ ಅವರ ಕೊಡುಗೆಗಳು, ಅವರ ಹಿರಿಮೆಯನ್ನು ದೇಶ ಇಂದಿಗೂ ಸ್ಮರಿಸುತ್ತಿದೆ, ಗೌರವಿಸುತ್ತಿದೆ.


COMMERCIAL BREAK
SCROLL TO CONTINUE READING

ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರ್ಯಪ್ಪನವರು (ಜನನ: ಜನವರಿ 28, 1899, ಮರಣ: ಮೇ 15, 1993) ಭಾರತೀಯ ಸೇನೆಯ ಅತ್ಯುನ್ನತ ಅಧಿಕಾರಿಯಾಗಿ, ಸೇವೆ ಸಲ್ಲಿಸಿದ್ದರು. ಅವರು ಕಮಾಂಡರ್ ಇನ್ ಚೀಫ್ ಹುದ್ದೆ ಅಲಂಕರಿಸಿ, ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದರು. 1947ರ ಭಾರತ - ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ, ಕಾರ್ಯಪ್ಪನವರು ಪಶ್ಚಿಮದಲ್ಲಿ ಭಾರತೀಯ ಸೇನೆಯ ನೇತೃತ್ವ ವಹಿಸಿದ್ದರು. 1949ರಲ್ಲಿ, ಕಾರ್ಯಪ್ಪನವರು ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿ ನೇಮಕಗೊಂಡರು. ಭಾರತೀಯ ಸೇನೆಯಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಏರಿದ ಕೇವಲ ಇಬ್ಬರು ಸೇನಾಧಿಕಾರಿಗಳಲ್ಲಿ ಕಾರ್ಯಪ್ಪನವರೂ ಒಬ್ಬರಾಗಿದ್ದು, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್‌ಶಾ ಅವರು ಇನ್ನೊಬ್ಬ ಅಧಿಕಾರಿಯಾಗಿದ್ದಾರೆ.


ಇದನ್ನೂ ಓದಿ:ರಾಜಾ ರಾಮಣ್ಣ: ಭಾರತದ ಅಣುಶಕ್ತಿ ಯುಗದ ನಿರ್ಮಾತೃವಿನ ಸ್ಮರಣೆ


ಕಾರ್ಯಪ್ಪನವರು ಅಂದಿನ ಕೂರ್ಗ್ ಪ್ರೊವಿನ್ಸ್‌ಗೆ (ಈಗ ಕೊಡಗು ಜಿಲ್ಲೆ) ಸೇರಿದ್ದ ಶನಿವಾರಸಂತೆಯಲ್ಲಿ ಕೊಡವ ಕೃಷಿ ಕುಟುಂಬದಲ್ಲಿ ಜನಿಸಿದ್ದರು. ಅವರ ತಂದೆ ಮಾದಪ್ಪನವರು ಕಂದಾಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಕಾರ್ಯಪ್ಪನವರನ್ನು ಮನೆಯಲ್ಲಿ ಪ್ರೀತಿಯಿಂದ 'ಚಿಮ್ಮ' ಎಂದು ಕರೆಯುತ್ತಿದ್ದರು. ಅವರು ಆರು ಮಕ್ಕಳಲ್ಲಿ ಎರಡನೆಯವರಾಗಿದ್ದು, ಅವರಿಗೆ ಇಬ್ಬರು ಸಹೋದರಿಯರು ಮತ್ತು ಮೂವರು ಸಹೋದರರಿದ್ದರು. ಕಾರ್ಯಪ್ಪನವರು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿ, ಬಳಿಕ ಚೆನ್ನೈನ ಪ್ರೆಸಿಡೆನ್ಸಿ ಕಾಲೇಜ್‌ಗೆ ಸೇರ್ಪಡೆಗೊಂಡರು. ಕಾಲೇಜ್ ವ್ಯಾಸಂಗ ನಡೆಸುವ ಸಂದರ್ಭದಲ್ಲಿ, ಸೇನೆಯಲ್ಲಿ ಭಾರತೀಯರಿಗೆ ಅವಕಾಶ ಇರುವುದು ಅವರಿಗೆ ತಿಳಿದುಬಂತು. ಕಾರ್ಯಪ್ಪನವರಿಗೆ ಸೈನಿಕನಾಗುವ ಹಂಬಲ ಇದ್ದುದರಿಂದ, ಅವರೂ ಸೇನೆಗೆ ಸೇರಲು ಅರ್ಜಿ ಸಲ್ಲಿಸಿದರು. ಅರ್ಜಿ ಸಲ್ಲಿಸಿದ 70 ಅಭ್ಯರ್ಥಿಗಳಲ್ಲಿ ಇಂದೋರ್‌ನ ಡೇಲಿ ಕೆಡೆಟ್ ಕಾಲೇಜಿಗೆ 42 ಜನರು ಆಯ್ಕೆಯಾಗಿದ್ದು, ಅವರಲ್ಲಿ ಕಾರ್ಯಪ್ಪನವರೂ ಒಬ್ಬರಾಗಿದ್ದರು. ಕಾರ್ಯಪ್ಪನವರು ತನ್ನ ತರಬೇತಿಯಲ್ಲಿ ಅತ್ಯುತ್ತಮ ಸಾಧನೆ ತೋರಿ, ತನ್ನ ತರಗತಿಯಲ್ಲಿ ಏಳನೇ ಸ್ಥಾನ ಪಡೆದರು.


ಒಂದನೇ ಮಹಾಯುದ್ಧದ (1914-1918) ಅವಧಿಯಲ್ಲಿ ಕಾರ್ಯಪ್ಪನವರು ಮಿಲಿಟರಿ ತರಬೇತಿ ಪಡೆದರಾದರೂ, ಅವರಿಗೆ ನೇರವಾಗಿ ಯುದ್ಧದಲ್ಲಿ ಭಾಗವಹಿಸಲು ಅವಕಾಶ ಲಭಿಸಲಿಲ್ಲ. ಮಹಾಯುದ್ಧದ ಬಳಿಕ, ಭಾರತೀಯ ನಾಯಕರು ಬ್ರಿಟಿಷರ ಬಳಿ ಭಾರತೀಯ ಸೇನಾ ಅಧಿಕಾರಿಗಳನ್ನು ಭಾರತೀಯ ಸೇನೆಗೆ ನೇಮಿಸಲು ಆಗ್ರಹಿಸಿದರು. 1919ರಲ್ಲಿ, ಈ ಉದ್ದೇಶಕ್ಕಾಗಿ ಆಯ್ಕೆಯಾದ ಭಾರತೀಯರ ಮೊದಲ ತಂಡದಲ್ಲಿ ಕಾರ್ಯಪ್ಪನವರೂ ಒಬ್ಬರಾಗಿದ್ದರು. ಬಳಿಕ ಅವರನ್ನು ತರಬೇತಿಗಾಗಿ ಇಂದೋರ್‌ಗೆ ಕಳುಹಿಸಲಾಯಿತು. ತರಬೇತಿ ಪೂರ್ಣಗೊಳಿಸಿದ ಬಳಿಕ, ಕಾರ್ಯಪ್ಪನವರನ್ನು ಬಾಂಬೆಯ (ಇಂದಿನ ಮುಂಬೈ) ಕರ್ನಾಟಿಕ್ ಇನ್‌ಫ್ಯಾಂಟ್ರಿಗೆ ನೇಮಿಸಲಾಯಿತು.


ಇದನ್ನೂ ಓದಿ:ತೈವಾನ್‌ಗೆ ಸಂದ ಪದ್ಮಭೂಷಣ: ಮೋದಿಯವರ ರಾಜತಾಂತ್ರಿಕತೆ ಪ್ರದರ್ಶನ


ಕಾರ್ಯಪ್ಪ ಮಿಲಿಟರಿ ವೃತ್ತಿಜೀವನದ ಹುದ್ದೆಗಳಲ್ಲಿ ಮೇಲೇರುತ್ತಾ, 1923ರಲ್ಲಿ ಲೆಫ್ಟಿನೆಂಟ್‌ ಆದರು. 1927ರಲ್ಲಿ ಕ್ಯಾಪ್ಟನ್ ಆದರು, 1942ರಲ್ಲಿ ಲೆಫ್ಟಿನೆಂಟ್‌ ಕೊಲೊನೆಲ್ ಆಗಿ, 1946ರಲ್ಲಿ ಬ್ರಿಗೇಡಿಯರ್ ಹುದ್ದೆಗೇರಿದರು. ಬ್ರಿಟಿಷ್ ಆಡಳಿತದಡಿ ಕಾರ್ಯ ನಿರ್ವಹಿಸುವಾಗ, ಕಾರ್ಯಪ್ಪನವರು ಮಧ್ಯ ಪೂರ್ವ (1941-1942), ಬರ್ಮಾ (ಇಂದಿನ ಮಯನ್ಮಾರ್, 1943-1944) ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದರು. 1942ರಲ್ಲಿ, ಕಾರ್ಯಪ್ಪನವರು ಒಂದು ಸೇನಾಪಡೆಯ ನೇತೃತ್ವ ವಹಿಸಿದ ಮೊದಲ ಭಾರತೀಯ ಅಧಿಕಾರಿ ಎನಿಸಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅವರು ನೀಡಿದ ಕೊಡುಗೆಗಳನ್ನು ಗುರುತಿಸಿ, ಅವರನ್ನು ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್ ಸದಸ್ಯನನ್ನಾಗಿ ನೇಮಿಸಿ, ಗೌರವಿಸಲಾಯಿತು. 1947ರಲ್ಲಿ ಭಾರತ ಸ್ವತಂತ್ರಗೊಳ್ಳುವ ಮೊದಲು ನಡೆದ ಭಾರತ - ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ, ಎರಡು ಹೊಸ ದೇಶಗಳಿಗೆ ಸೇನಾಪಡೆಗಳನ್ನು ವಿಭಜಿಸುವ ಸವಾಲಿನ ಜವಾಬ್ದಾರಿಯೂ ಕಾರ್ಯಪ್ಪನವರದಾಗಿತ್ತು.


ಭಾರತ ಸ್ವತಂತ್ರಗೊಂಡ ಬಳಿಕ, ಕಾರ್ಯಪ್ಪನವರನ್ನು ಮೇಜರ್ ಜನರಲ್ ರಾಂಕ್‌ನೊಂದಿಗೆ, ಡೆಪ್ಯುಟಿ ಚೀಫ್ ಆಫ್ ಜನರಲ್ ಸ್ಟಾಫ್ (ಉಪ ಸೇನಾ ಮುಖ್ಯಸ್ಥ) ಆಗಿ ನೇಮಿಸಲಾಯಿತು. ಅದಾದ ಬಳಿಕ, ಅವರು ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ಪಡೆದು, ನವೆಂಬರ್ 1947ರಲ್ಲಿ ಈಸ್ಟರ್ನ್ ಆರ್ಮಿಯ ನೇತೃತ್ವ ವಹಿಸಿದರು. ಬಳಿಕ, ಮುಂದಿನ ವರ್ಷ ಜನವರಿ ತಿಂಗಳಲ್ಲಿ, ಅವರು ದೆಹಲಿ ಮತ್ತು ಈಸ್ಟ್ ಪಂಜಾಬ್ ಕಮಾಂಡಿನ (ಈಗ ವೆಸ್ಟರ್ನ್ ಕಮಾಂಡ್) ಸೇನಾ ಕಮಾಂಡರ್ ಆದರು.


ಇದನ್ನೂ ಓದಿ:ಮಹಿಳಾ ಕೇಂದ್ರಿತ 75ನೇ ಗಣರಾಜ್ಯೋತ್ಸವಕ್ಕೆ ಮಾಕ್ರೋನ್ ಮುಖ್ಯ ಅತಿಥಿ


ಜನವರಿ 1949ರಲ್ಲಿ, ಕಾರ್ಯಪ್ಪನವರು ಬ್ರಿಟಿಷ್ ಕಮಾಂಡಿಂಗ್ ಜನರಲ್ ಸರ್ ಫ್ರಾನ್ಸಿಸ್ ರಾಯ್ ಬುಚರ್ ಅವರಿಂದ ಅಧಿಕಾರ ಸ್ವೀಕರಿಸಿ, ಭಾರತೀಯ ಸೇನಾಪಡೆಯ ಮೊದಲ ಭಾರತೀಯ ಮುಖ್ಯಸ್ಥ ಎನಿಸಿದರು. ಸೇನಾ ಮುಖ್ಯಸ್ಥರಾದ ಬಳಿಕ, ಕಾರ್ಯಪ್ಪನವರಿಗೆ ಬ್ರಿಟಿಷರಿಂದ ರೂಪಿಸಲ್ಪಟ್ಟಿದ್ದ ಭಾರತೀಯ ಸೇನೆಯನ್ನು ದೇಶಕ್ಕಾಗಿ ಸೇವೆ ಸಲ್ಲಿಸುವ ಸೇನೆಯಾಗಿ ರೂಪಿಸುವ ಜವಾಬ್ದಾರಿ ಇತ್ತು.


ಕಾರ್ಯಪ್ಪನವರು 1953ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿ, 1956ರ ತನಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದರು. ತನ್ನ ನಿವೃತ್ತಿಯ ಬಳಿಕವೂ, ಕಾರ್ಯಪ್ಪನವರು ಭಾರತೀಯ ಸೇನೆಯೊಡನೆ ನಿರಂತರ ಸಂಪರ್ಕದಲ್ಲಿದ್ದರು. ಅವರು 1965 ಮತ್ತು 1971ರ ಪಾಕಿಸ್ತಾನ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಸೇನೆಗೆ ಭೇಟಿ ನೀಡಿ, ಭಾರತೀಯ ಸೈನಿಕರನ್ನು ಹುರಿದುಂಬಿಸಿದರು.


ಕಾರ್ಯಪ್ಪನವರು ಭಾರತ ತನ್ನ ಮಿಲಿಟರಿ ಅವಶ್ಯಕತೆಗಳನ್ನು ಪೂರೈಸಲು ತನ್ನದೇ ಆದ ಉದ್ಯಮಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಬಲವಾಗಿ ಅಭಿಪ್ರಾಯ ಪಟ್ಟಿದ್ದರು. ಅವರು ಸೇನೆ ಯಾವತ್ತೂ ರಾಜಕೀಯಕ್ಕೆ ಒಳಗಾಗಬಾರದು, ಮತ್ತು ಸರ್ಕಾರದ ಆದೇಶಗಳನ್ನು ಪಾಲಿಸಬೇಕು ಎಂದು ಒತ್ತಿ ಹೇಳಿದ್ದರು. 1986ರಲ್ಲಿ, ಭಾರತ ಸರ್ಕಾರ ಅವರು ಭಾರತಕ್ಕೆ ನೀಡಿದ ಅಪರಿಮಿತ ಕೊಡುಗೆಯನ್ನು ಗೌರವಿಸಿ, ಫೀಲ್ಡ್ ಮಾರ್ಷಲ್ ಹುದ್ದೆಗೆ ನೇಮಿಸಿ, ಗೌರವ ಸಲ್ಲಿಸಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.