ನವದೆಹಲಿ:  ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರವನ್ನು ರಾಷ್ಟ್ರ ಪತಿ ರಾಮನಾಥ್ ಕೊವಿಂದ್ ಅವರು ಇಂದು ಸಂಸತ್ತಿನ ಸೆಂಟ್ರಲ್ ಹಾಲ್'ನಲ್ಲಿ ಅನಾವರಣ ಮಾಡಲಿದ್ದಾರೆ.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಪ್ರಧಾನಿ ನರೇಂದ್ರ ಮೋದಿ, ಸಚಿವರು ಮತ್ತು ವಿವಿಧ ಪಕ್ಷಗಳ ನಾಯಕರ ಉಪಸ್ಥಿತಿಯಲ್ಲಿ ಭಾರತ ರತ್ನ ಅಟಲ್ ಅವರ ಭಾವಚಿತ್ರ  ಅನಾವರಣಗೊಳಿಸಲಾಗುವುದು ಎಂದು ಸಂಸತ್ತಿನ ಅಧಿಕಾರಿಗಳು ತಿಳಿಸಿದ್ದಾರೆ.


ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದ ಪಾರ್ಲಿಮೆಂಟ್ಸ್ ಪೋಟ್ರೇಟ್ ಸಮಿತಿಯ ಸಭೆಯಲ್ಲಿ ಡಿಸೆಂಬರ್ 18 ರಂದು ಭಾರತ ರತ್ನ ವಾಜಪೇಯಿ ಅವರ ಭಾವಚಿತ್ರವನ್ನು ಸಂಸತ್ತಿನಲ್ಲಿ ಸ್ಥಾಪಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ವಾಜಪೇಯಿ ಅವರ ಭಾವಚಿತ್ರವನ್ನು ವರ್ಣ ಚಿತ್ರಕಾರ ಕೃಷ್ಣ ಕನ್ಹಾಯ್ ತೈಲ ವರ್ಣದಲ್ಲಿ ಬಿಡಿಸಿ ಸಿದ್ಧಗೊಳಿಸಿದ್ದಾರೆ. 


1996 ರಲ್ಲಿ 13 ದಿನಗಳ ಕಾಲ ಸೇರಿದಂತೆ ಮೂರು ಬಾರಿ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಬಿಜೆಪಿಯ ಹಿರಿಯ ಮುತ್ಸದ್ಧಿ ವಾಜಪೇಯಿ ಅವರು, 1924 ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಜನಿಸಿದರು.  ಆದರೆ, 2009ರಲ್ಲಿ ಪಾರ್ಶ್ವವಾಯುಗೆ ತುತ್ತಾದ ಬಳಿಕ ಅವರ ಒಂದೇ ಕಿಡ್ನಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲದೆ, ಹೃದಯ, ಕಿಡ್ನಿ ಮತ್ತು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ವಾಜಪೇಯಿ ಸುದೀರ್ಘವಾದ ಅನಾರೋಗ್ಯದ ನಂತರ ಆಗಸ್ಟ್ 16, 2018ರಂದು ನಿಧನರಾದರು.