ನವದೆಹಲಿ: ಒಂದು ತಿಂಗಳಿಗೂ ಹೆಚ್ಚು ಕಾಲ ಸುದೀರ್ಘವಾಗಿ ನಡೆದಿರುವ ಲೋಕಸಭೆ ಚುನಾವಣೆ 2019 ಅಂತಿಮ ಹಂತಕ್ಕೆ ತಲುಪಿದ್ದು, ಇಂದು ಅಂತಿಮ ಹಂತದ ಮತದಾನ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಏಳು ರಾಜ್ಯ, ಒಂದು ಕೇಂದ್ರಾಡಳಿತ ಪ್ರದೇಶದ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 


COMMERCIAL BREAK
SCROLL TO CONTINUE READING

ಪಂಜಾಬ್, ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಹಿಮಾಚಲ ಪ್ರದೇಶ ಹಾಗೂ ಚಂಡೀಘಡ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 59 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, 918 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕೊನೆಯ ಹಂತದಲ್ಲಿ 10.17 ಕೋಟಿ ಮತದಾರರು ತಮ್ಮ ಮತ ಚಲಾಯಿಸಲು ಅರ್ಹರಾಗಿದ್ದು, 1.12 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 


ಪಂಜಾಬ್ ನ 13ಕ್ಷೇತ್ರಗಳು, ಉತ್ತರ ಪ್ರದೇಶದ 13, ಪಶ್ಚಿಮ ಬಂಗಾಳದ 9, ಬಿಹಾರದ 8, ಮಧ್ಯಪ್ರದೇಶದ 8, ಹಿಮಾಚಲ ಪ್ರದೇಶ 4, ಜಾರ್ಖಂಡ್ 4, ಚಂಡೀಗಢ 1 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಕ್ಷೇತ್ರದಿಂದ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ ಪುರ ಕ್ಷೇತ್ರದಿಂದ ಕಣದಲ್ಲಿದ್ದಾರೆ. ನಟ ಸನ್ನಿ ಡಿಯೋಲ್ ಗುರುದಾಸ್‌ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.


ಈಗಾಗಲೇ ಮತದಾನಕ್ಕೆ ಸಿದ್ದತೆ ಕೊನೆಯ ಹಂತದಲ್ಲಿದ್ದು, ಮತದಾರರು ಮತದಾನದ ಹಕ್ಕು ಚಲಾಯಿಸಲು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.





ಲೋಕಸಭಾ ಚುನಾವಣೆ 2019ಕ್ಕೆ ಏಳು ಹಂತಗಳಲ್ಲಿ ಮತದಾನ ನಡೆದಿದ್ದು, ಎಲ್ಲಾ ಹಂತಗಳ ಮತದಾನದ ಫಲಿತಾಂಶ ಮೇ 23ರಂದು ಹೊರಬೀಳಲಿದೆ.