ಲಕ್ನೊ: ಲೋಕಸಭಾ ಚುನಾವಣೆಗಾಗಿ ಎಸ್ಪಿ-ಬಿಎಸ್ಪಿ ಮೈತ್ರಿ ಹಿನ್ನೆಲೆಯಲ್ಲಿ 24 ವರ್ಷಗಳ ಬಳಿಕ ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಪರವಾಗಿಮೈನ್ಪುರಿ ಕ್ಷೇತ್ರದಲ್ಲಿ ಬಹುಜನ ಸಮಾಜಪಕ್ಷದ ನಾಯಕಿ ಮಾಯಾವತಿ ಪ್ರಚಾರ ಮಾಡಲಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಹಿತಿ ನೀಡಿರುವ ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ, ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಪರವಾಗಿ ಏಪ್ರಿಲ್ 19ರಂದು ಬಿಎಸ್ಪಿ ನಾಯಕಿ ಮಾಯಾವತಿ ಮೈನ್ಪುರಿ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಅಂದು ನಡೆಯುವ ಚುನಾವಣಾ ರ್ಯಾಲಿಯಲ್ಲಿ ಮಾಯಾವತಿ, ಅಖಿಲೇಶ್ ಯಾದವ್ ಹಾಗೂ ರಾಷ್ಟ್ರೀಯ ಲೋಕ ದಳದ ಅಧ್ಯಕ್ಷ ಅಜಿತ್ ಸಿಂಗ್ ಭಾಷಣ ಮಾಡಲಿದ್ದಾರೆ.


ಜೂನ್ 1995 ರ ಕುಖ್ಯಾತ ಗೆಸ್ಟ್ ಹೌಸ್ ಹಗರಣದ ಬಳಿಕ ಮುಲಾಯಂ ಮತ್ತು ಮಾಯಾವತಿ ಮೈತ್ರಿ ಮುರಿದುಕೊಂಡಿದ್ದರು. ಆದರೆ ದೇಶದ ಒಳಿತಿಗಾಗಿ ಆ ಹಗರಣದ ಘಟನೆಯನ್ನು ಮರೆತು ಮತ್ತೆ ಒಂದಾಗಿ ಲೋಕಸಭಾ ಚುನಾವಣೆ ಎದುರಿಸಲು ಮುಂದಾಗಿರುವುದನ್ನು ಬಿಜೆಪಿ ಟೀಕಿಸಿತ್ತು. ಉತ್ತರ ಪ್ರದೇಶ ರಾಜಕೀಯ ಇತಿಹಾಸದಲ್ಲಿ 1995ರ ಆ ಘಟನೆಯ ಬಳಿಕ ಎರಡೂ ಪಕ್ಷಗಳೂ ಜಂಟಿಯಾಗಿ ವೇದಿಕೆ ಹಂಚಿಕೊಂಡಿರಲಿಲ್ಲ. ಆದರೀಗ ಬರೋಬ್ಬರಿ 24 ವರ್ಷಗಳ ಬಳಿಕ ಮಾಯಾವತಿ ಅವರೇ ಮೈನ್ಪುರಿ ಕ್ಷೇತ್ರದಲ್ಲಿ ಮುಲಾಯಂ ಪರವಾಗಿ ಪ್ರಚಾರ ನಡೆಸಲಿದ್ದಾರೆ. 


ಏಪ್ರಿಲ್-ಮೇ ತಿಂಗಳಿನಲ್ಲಿ ಒಟ್ಟು 7 ಹಂತಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಜಂಟಿಯಾಗಿ 11 ರ್ಯಾಲಿಗಲ್ಲಿ ಭಾಗವಹಿಸಲಿದ್ದು, ಎಸ್ಪಿ-ಬಿಎಸ್ಪಿ-ಆರ್ಎಡಿ ಮೈತ್ರಿ ಬೆಂಬಲಿಸುವಂತೆ ಮತದಾರರನ್ನು ಮನವಿ ಮಾಡಲಿದ್ದಾರೆ. ಈ ಜಂಟಿ ಸಮಾವೇಶಗಳಿಂದಾಗಿ ಕೇಂದ್ರದಲ್ಲಿರುವ ಬಿಜೆಪಿಯನ್ನು ಹೊರಗಿಟ್ಟು, ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಎಸ್ಪಿ ವಕ್ತಾರ ತಿಳಿಸಿದ್ದಾರೆ.


ಈಗಾಗಲೇ ಸಮಾವೇಶದ ದಿನಾಂಕಗಳು ನಿಗದಿಯಾಗಿದ್ದು, ಏಪ್ರಿಲ್ 7ರಂದು ಸಹರಾನ್ಪುರದ ದಿಯೋಬಂದ್, ಏಪ್ರಿಲ್ 13ರಂದು ಬದಾನ್, ಏಪ್ರಿಲ್ 16ರಂದು ಆಗ್ರಾ, ಏಪ್ರಿಲ್' 19ರಂದು ಮೈನ್ಪುರಿ, ಏಪ್ರಿಲ್ 20ರಂದು ರಾಂಪುರ್ ಮತ್ತು ಫಿರೋಜಬಾದ್ ನಲ್ಲಿ ನಡೆಯಲಿರುವ ಜಂಟಿ ಸಮಾವೇಶದಲ್ಲಿ ಅಖಿಲೇಶ್- ಮಾಯಾವತಿ ಭಾಗವಹಿಸಲಿದ್ದಾರೆ.