ಲೋಕಸಭಾ ಚುನಾವಣೆ 2019: ಕೇರಳದಲ್ಲಿ 300ಕ್ಕೂ ಅಧಿಕ ಪ್ರಕರಣಗಳ ದಾಖಲು
ರಾಜಕೀಯವಾಗಿ ಪ್ರಬಲವಾಗಿರುವ ಕಣ್ಣೂರು ಜಿಲ್ಲೆಯಲ್ಲಿ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿದಂತೆ 79 ಪ್ರಕರಣಗಳು ದಾಖಲಾಗಿವೆ.
ತಿರುವನಂತಪುರ: ಲೋಕಸಭಾ ಚುನಾವಣೆಗೆ ಶಾಂತಿಯುತವಾಗಿ ಹಾಗೂ ಅತಿ ಹೆಚ್ಚು ಮತದಾನ ನಡೆದ ಕೇರಳದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 347 ಪ್ರಕರಣಗಳು ದಾಖಲಾಗಿವೆ.
ರಾಜಕೀಯವಾಗಿ ಪ್ರಬಲವಾಗಿರುವ ಕಣ್ಣೂರು ಜಿಲ್ಲೆಯಲ್ಲಿ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿದಂತೆ 79 ಪ್ರಕರಣಗಳು ದಾಖಲಾಗಿವೆ. ಕೊಟ್ಟಾಯಂನಲ್ಲಿ ಅತಿ ಕಡಿಮೆ ಅಂದರೆ ಕೇವಲ 2 ಪ್ರಕರಣಗಳು ದಾಖಲಾಗಿವೆ ಎಂದು ಡಿಜಿಪಿ ಲೋಕನಾಥ್ ಬೆಹೆರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
2016 ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ. 2016ರಲ್ಲಿ ಒಟ್ಟು 613 ಪ್ರಕರಣಗಳು ದಾಖಲಾಗಿದ್ದವು.
ಈ ಅಂಕಿ ಅಂಶಗಳು ಚುನಾವಣೆ ಅಧಿಸೂಚನೆ ಪ್ರಕಟವಾದ ದಿನದಿಂದ ಮತದಾನದ ದಿನದವರೆಗೆ ದಾಖಲಾಗಿರುವುದಾಗಿವೆ. ಪೋಲಿಸ್ ಮತ್ತು ಗೃಹ ಇಲಾಖೆಯ ಪರಿಣಾಮಕಾರಿ ಕ್ರಮಗಳ ಹಿನ್ನೆಲೆಯಲ್ಲಿ ಎಪ್ರಿಲ್ 23 ರಂದು ರಾಜ್ಯವು ಅಧಿಕ ಮತದಾನವನ್ನು ದಾಖಲಿಸಿದೆ ಎಂದು ಲೋಕನಾಥ್ ಹೇಳಿದ್ದಾರೆ.
ರಾಜ್ಯದ 20 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಳೆದ 30 ವರ್ಷಗಳಲ್ಲಿ ಈ ಬಾರಿ ಅತ್ಯಧಿಕ ಪ್ರಮಾಣದ (ಶೇ.77.68 ) ಮತದಾನಕ್ಕೆ ಕೇರಳ ಸಾಕ್ಷಿಯಾಗಿದೆ.