ಲೋಕಸಭಾ ಚುನಾವಣೆ: ಇಂದು 2ನೇ ಹಂತದಲ್ಲಿ 95 ಕ್ಷೇತ್ರಗಳಿಗೆ ಮತದಾನ
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಗುರುವಾರ ಕೇವಲ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಆದರೆ 39 ಲೋಕಸಭಾ ಕ್ಷೇತ್ರಗಳನ್ನೊಳಗೊಂಡಿರುವ ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಎಲ್ಲಾ 39 ಕ್ಷೇತ್ರಗಳಿಗೂ ಮತದಾನ ನಡೆಸಲಾಗುತ್ತಿದೆ.
ನವದೆಹಲಿ: ಲೋಕಸಭಾ ಚುನಾವಣೆಗೆ ಇಂದು ಎರಡನೇ ಹಂತದ ಮತದಾನ ನಡೆಯಲಿದ್ದು ಕರ್ನಾಟಕ ಸೇರಿದಂತೆ 11 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಗುರುವಾರ ಕೇವಲ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಆದರೆ 39 ಲೋಕಸಭಾ ಕ್ಷೇತ್ರಗಳನ್ನೊಳಗೊಂಡಿರುವ ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಎಲ್ಲಾ 39 ಕ್ಷೇತ್ರಗಳಿಗೂ ಮತದಾನ ನಡೆಸಲಾಗುತ್ತಿದೆ. ಡಿಎಂಕೆ ಅಭ್ಯರ್ಥಿಯಾಗಿ ಕನಿಮೋಳಿ ಕಣಕ್ಕಿಳಿದಿರುವ ಟೂಟುಕುಡಿ, ದಯಾನಿಧಿ ಮಾರನ್ ಸ್ಪರ್ಧಿಸುತ್ತಿರುವ ಚೆನ್ನೈ ಸೆಂಟ್ರಲ್, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಿವಗಂಗಾ, ಎಐಎಡಿಎಂಕೆ ನಾಯಕ ತಂಬಿದೊರೈ ಮತ್ತೊಮ್ಮೆ ಸ್ಪರ್ಧೆ ಮಾಡುತ್ತಿರುವ ಕರೂರು ಕ್ಷೇತ್ರಗಳು ಪ್ರಮುಖವಾದವು.
ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಹಣ, ಮದ್ಯದ ಹಂಚಿಕೆಯಿಂದಾಗಿ ಚುನಾವಣೆಯನ್ನು ಮುಂದೂಡಲಾಗಿದೆ. ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಿದ್ದಾರೆ.
ಇದಲ್ಲದೆ ಮಹಾರಾಷ್ಟ್ರದ 10, ಉತ್ತರಪ್ರದೇಶದ 8, ಅಸ್ಸಾಂ, ಬಿಹಾರ ಮತ್ತು ಒರಿಸ್ಸಾದ ತಲಾ 5, ಛತ್ತೀಸ್‍ಗಢ ಮತ್ತು ಪಶ್ಚಿಮ ಬಂಗಾಳದ ತಲಾ 3, ಜಮ್ಮು-ಕಾಶ್ಮೀರದ 2, ಮಣಿಪುರ, ತ್ರಿಪುರ ಹಾಗೂ ಪುದುಚೇರಿಯ ತಲಾ 1 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ.
ಉತ್ತರಪ್ರದೇಶದ 8 ಕ್ಷೇತ್ರಗಳಿಂದ ಒಟ್ಟು 85 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಟಿ ಹೇಮಮಾಲಿನಿ ಬಿಜೆಪಿಯಿಂದ ಮತ್ತೊಮ್ಮೆ ಕಣಕ್ಕಿಳಿದಿರುವ ಮಥುರಾ ಕ್ಷೇತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ. ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಈ ಎಲ್ಲಾ ಕ್ಷೇತ್ರಗಳಲ್ಲೂ ಅಬ್ಬರದ ಪ್ರಚಾರ ನಡೆಸಿವೆ.
ಮೊದಲ ಹಂತದ ಮತದಾನದ ವೇಳೆ ಆಂಧ್ರಪ್ರದೇಶದಲ್ಲಿ ಹಿಂಸಾಚಾರ ಸಂಭವಿಸಿದ್ದು, ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ಗೆ ಸೇರಿದ ಇಬ್ಬರು ಕಾರ್ಯಕರ್ತರು ಬಲಿಯಾಗಿದ್ದರು. ಇನ್ನೂ ಕೆಲವೆಡೆ ನಡೆದ ಗಲಾಟೆಯಲ್ಲಿ ಅನೇಕರು ಗಾಯಗೊಂಡಿದ್ದರು. ಇದರಿಂದ ಎರಡನೇ ಹಂತದ ಮತದಾನ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಅದರಲ್ಲಿಯೂ ನಕ್ಸಲ್ ಪೀಡಿತ ಪ್ರದೇಶಗಳಾದ ಛತ್ತೀಸ್‍ಗಢ, ಬಿಹಾರ ಮತ್ತು ಒರಿಸ್ಸಾದಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಮಣಿಪುರ ಮತ್ತು ತ್ರಿಪುರ ರಾಜ್ಯಗಳಲ್ಲಿ ಉಗ್ರಗಾಮಿಗಳ ದಾಳಿ ಆತಂಕ ಮೂಡಿದೆ. ಹಾಗಾಗಿ ಇಲ್ಲಿಯೂ ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್ ಮಾಡಲಾಗಿದೆ. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಕ್ಸಲ್ ಮತ್ತು ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ. ಹಾಗಾಗಿ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಚುನಾವಣಾ ಮತದಾನ ನಡೆಸಲು ಆಯೋಗ ಮುಂದಾಗಿದೆ.