ಲೋಕಸಭಾ ಚುನಾವಣೆ 2019: ಮತದಾನದ ಹಕ್ಕು ಚಲಾಯಿಸಿದ ಯೋಗಿ, ನಿತೀಶ್ ಕುಮಾರ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮತ ಚಲಾಯಿಸಿದರು.
ನವದೆಹಲಿ: ಲೋಕಸಭಾ ಚುನಾವಣೆ 2019ರ ಏಳನೇ ಹಂತದ ಮತದಾನ ಬೆಳಿಗ್ಗೆ 7 ಗಂಟೆಯಿಂದಲೇ ಆರಂಭವಾಗಿದ್ದು 8 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು 59 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮತ ಚಲಾಯಿಸಿದರು.
ಬಿಹಾರದ ರಾಜಭವನದ ಶಾಲೆಯೊಂದರಲ್ಲಿರುವ ಮತಗಟ್ಟೆ ಸಂಖ್ಯೆ 326ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
"ಚುನಾವಣೆಗಳನ್ನು ದೀರ್ಘಕಾಲದವರೆಗೆ ನಡೆಸಬಾರದು. ಪ್ರತಿಯೊಂದು ಹಂತದ ಮತದಾನದ ನಡುವೆ ಸಾಕಷ್ಟು ದಿನಗಳ ಅಂತರ ಸೂಕ್ತವಲ್ಲ. ಈ ಬಗ್ಗೆ ಗಮನಹರಿಸಲು ಎಲ್ಲಾ ಪಕ್ಷಗಳ ನಾಯಕರಿಗೆ ಪತ್ರ ಬರೆಯುತ್ತೇನೆ" ಎಂದು ಹೇಳಿದರು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ಪುರದ ಮತಗಟ್ಟೆ ಸಂಖ್ಯೆ 246ರಲ್ಲಿ ಮತ ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಡೀ ದೇಶವೇ ಉತ್ಸಾಹದಲ್ಲಿದೆ. ಮೈತ್ರಿ ಪಕ್ಷಗಳ ಸ್ಥಾನಗಳೂ ಸೇರಿದಂತೆ ಒಟ್ಟು 400 ಸ್ಥಾನಗಳನ್ನು ಎನ್ ಡಿಎ ಮೈತ್ರಿಕೂಟ ಗಳಿಸುವ ವಿಶ್ವಾಸವಿದೆ. ಪ್ರಧಾನಿ ಮೋದಿ ಸಹ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ಜನತೆಯಲಿ ಮನವಿ ಮಾಡಿದ್ದಾರೆ ಎಂದರು.
ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಸಹ ಪಾಟ್ನಾದ ಮತಗಟ್ಟೆ ಸಂಖ್ಯೆ 49ರಲ್ಲಿ ಮತ ಚಲಾಯಿಸಿದರು.
ಪಂಜಾಬ್ ನ 13ಕ್ಷೇತ್ರಗಳು, ಉತ್ತರ ಪ್ರದೇಶದ 13, ಪಶ್ಚಿಮ ಬಂಗಾಳದ 9, ಬಿಹಾರದ 8, ಮಧ್ಯಪ್ರದೇಶದ 8, ಹಿಮಾಚಲ ಪ್ರದೇಶ 4, ಜಾರ್ಖಂಡ್ 4, ಚಂಡೀಗಢ 1 ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಕ್ಷೇತ್ರದಿಂದ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ ಪುರ ಕ್ಷೇತ್ರದಿಂದ ಕಣದಲ್ಲಿದ್ದಾರೆ. ನಟ ಸನ್ನಿ ಡಿಯೋಲ್ ಗುರುದಾಸ್‌ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಸಂಜೆ 6 ಗಂಟೆಗೆ ಮತದಾನ ಪೂರ್ಣ ಗೊಳ್ಳಲಿದೆ. ಎಲ್ಲ ಹಂತಗಳ ಮತಎಣಿಕೆ ಮೇ 23ರಂದು ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.