ನವದೆಹಲಿ: ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದ ಮಥುರಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಟಿ ಹಾಗೂ ರಾಜಕಾರಣಿ ಹೇಮಮಾಲಿನಿ, ಕೈಯಲ್ಲಿ ಕುಡುಗೋಲು ಹಿಡಿದು ಗೋವರ್ಧನ ಕ್ಷೇತ್ರದ ಮಹಿಳೆಯರನ್ನು ಭೇಟಿ ಮಾಡಿ ಭಾನುವಾರ ಮತಯಾಚಿಸಿದರು. 


COMMERCIAL BREAK
SCROLL TO CONTINUE READING

ಗೋವರ್ಧನ ಕ್ಷೇತ್ರದ ಮಹಿಳೆಯರ ಅಗತ್ಯತೆಗಳು ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಹೇಮಾ ಮಾಲಿನಿ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರೊಂದಿಗೆ ತಾವೂ ಕುಡುಗೋಲು ಹಿಡಿದು ಕೆಲಸ ಮಾಡಿ ಸಹಾಯ ಮಾಡಿದರು. 


ಈ ಬಗ್ಗೆ ಟ್ವೀಟ್ ಮಾಡಿರುವ ಹೇಮಮಾಲಿನಿ "ಗೋವರ್ಧನ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಪ್ರಚಾರ ಆರಂಭಿಸಿದೆ. ಅಲ್ಲಿನ ಮಹಿಳೆಯರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ದೊರೆಯಿತು" ಎನ್ನುವ ಮೂಲಕ ಕೆಲವು ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. 



2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆರ್ ಜೆಡಿ ಅಭ್ಯರ್ಥಿ ಜಯಂತ್ ಚೌಧರಿಯನ್ನು ಸೋಲಿಸಿದ್ದ ಹೇಮಮಾಲಿನಿ, ಈ ಬಾರಿಯ ಚುನಾವಣೆಯಲ್ಲಿಯೂ ಜಯಸಾಧಿಸುವ ವಿಶ್ವಾಸ ಹೊಂದಿದ್ದಾರೆ.  


ಉತ್ತರ ಪ್ರದೇಶದ ಮಥುರಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವ ಹಿರಿಯ ನಟಿ ಹೇಮಾ ಮಾಲಿನಿ ತಮ್ಮ ಆಸ್ತಿ ವಿವರ ಘೋಷಿಸಿದ್ದು, ಬಂಗಲೆ, ಆಭರಣ, ನಗದು, ಷೇರುಗಳು, ಹಾಗೂ ಡಿಪಾಸಿಟ್​ ಮಾಡಲಾಗಿರುವ ಹಣ ಸೇರಿದಂತೆ ಒಟ್ಟು 101 ಕೋಟಿ ರೂ. ಆಸ್ತಿಯ ಒಡತಿಯಾಗಿದ್ದಾರೆ. 2014 ರ ಚುನಾವಣೆ ಸಂದರ್ಭದಲ್ಲಿ ಹೇಮಮಾಲಿನಿ ತಮ್ಮ ಬಳಿ 66 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿದ್ದರು.