ಲೋಕಸಭಾ ಚುನಾವಣೆ 2019: ಏಪ್ರಿಲ್ 7ಕ್ಕೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಾಧ್ಯತೆ
ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆಯನ್ನು ಏಪ್ರಿಲ್ 7ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ನವದೆಹಲಿ: ಲೋಕಸಭಾ ಚುನಾವಣೆಗೆ ಒಂದು ವಾರವಷ್ಟೇ ಇರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆಯನ್ನು ಏಪ್ರಿಲ್ 7ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪ್ರಣಾಲೈಕ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಪ್ರಣಾಳಿಕೆ ಸಮಿತಿಯಲ್ಲಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್, ಪೀಯುಶ್ ಗೋಯಲ್, ರವಿಶಂಕರ್ ಪ್ರಸಾದ್, ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ 20 ಸದಸ್ಯರಿದ್ದಾರೆ. ಈ ಸಮಿತಿ 15 ಉಪಸಮಿತಿಗಳನ್ನು ಒಳಗೊಂಡಿದೆ.
2014 ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಏಪ್ರಿಲ್ 7 ರಂದು ರಿಲೀಸ್ ಮಾಡಿತ್ತು. 9 ಹಂತಗಳ ಚುನಾವಣೆಯಲ್ಲಿ ಮೊದಲ ಹಂತದ ಮಾತದಾನದ ದಿನದಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಆದರೆ, ಈ ಬಾರಿ ಮತದಾನ ನಡೆಯುವ ಮುನ್ನ 48 ಗಂಟೆಗಳಲ್ಲಿ ಯಾವುದೇ ರಾಜಕೀಯ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡುವಂತಿಲ್ಲ ಎಂದು ಆದೇಶಿಸಿದೆ.
ಈಗಾಗಲೇ ಕಾಂಗ್ರೆಸ್ 2019ರ ಲೋಕಸಭಾ ಚುನಾವಣೆಗೆ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 'ನ್ಯಾಯ್' ಯೋಜನೆ ಮೂಲಕ ಬಡ ಕುಟುಂಬಗಳಿಗೆ ವಾರ್ಷಿಕ 72,000 ರೂ. ನೇರ ಸಂದಾಯ, 5 ಕೋಟಿ ಬಡ ಕುಟುಂಬಗಳಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಅನ್ವಯ, ಶಕ್ತಿ ಯೋಜನೆ ಮೂಲಕ ರೈತರ ಸಂಪೂರ್ಣ ಸಾಲಮನ್ನಾ, ಕೃಷಿ ಬಿಕ್ಕಟ್ಟು ನಿವಾರಣೆಗಾಗಿ ಪ್ರಾದೇಶಿಕ ಮಟ್ಟದಲ್ಲಿ ರೈತರ ಬೆಳೆಗೆ ಪೂರಕವಾಗಿ ಕೈಗಾರಿಕೆಗಳ ಸ್ಥಾಪನೆ, ಮಹಿಳಾ ಸಬಲೀಕರಣಕ್ಕಾಗಿ ಮಹಿಳೆಯರಿಗೆ 33% ಮೀಸಲಾತಿ ನೀಡುವುದಾಗಿ ಭರವಸೆ ನೀಡಿದೆ. ಇದಕ್ಕೆ ವಿಭಿನ್ನವಾಗಿ ಯಾವ ಹೊಸ ಭರವಸೆಗಳನ್ನು ಬಿಜೆಪಿ ನಿದಲಿದೆ ಎಂಬ ಕುತೂಹಲ ಮತದಾರರಲ್ಲಿ ಮೂಡಿದೆ.