ನವದೆಹಲಿ: ಸೋಮವಾರದಂದು ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೂ ಹಣಕಾಸು ಮಸೂದೆ 2019 ನ್ನು ಜಾರಿಗೊಳಿಸಲಾಗಿದೆ.ಸಂಸತ್ತಿನ ಕೆಳಮನೆಯಲ್ಲಿ ಧ್ವನಿಮತದ ಮೂಲಕ ಮಸೂದೆಗೆ ಅಂಗಿಕಾರ ನೀಡಲಾಯಿತು.


COMMERCIAL BREAK
SCROLL TO CONTINUE READING

ಹಣಕಾಸು ಮಸೂದೆ ಕುರಿತ ಚರ್ಚೆ ವೇಳೆ ಪ್ರತಿಪಕ್ಷ ಕಾಂಗ್ರೆಸ್ ನ್ನು ತರಾಟೆಗೆ ತಗೆದುಕೊಂಡ ಹಣಕಾಸು ಸಚಿವ ಪಿಯುಶ್ ಗೋಯಲ್ ಬಡವರ ಮತ್ತು ರೈತರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ವಿರೋಧಿಸುವ ಮೂಲಕ ರಾಷ್ಟ್ರಕ್ಕೆ ದ್ರೋಹವೆಸಗುತ್ತಿದೆ ಎಂದು ಕಿಡಿಕಾರಿದರು.


ಕಳೆದ ನಾಲ್ಕು ವರ್ಷಗಳಲ್ಲಿ ಬಡವರಿಗೆ, ರೈತರಿಗೆ ಮತ್ತು ಮಧ್ಯಮ ವರ್ಗದವರಿಗೆ ಪ್ರಯೋಜನವನ್ನು ಒದಗಿಸಲು ಹಲವಾರು ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಈ ಮಧ್ಯಂತರ ಬಜೆಟ್ ಅದರ ಮುಂದುವರೆದ ಭಾಗ ಎಂದು ತಿಳಿಸಿದರು. ಇದೇ ವೇಳೆ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಬಗ್ಗೆ ಮಾತನಾಡಿದ ಸಚಿವರು ಪ್ರತಿ ವರ್ಷವೂ ಸಣ್ಣ ರೈತರಿಗೆ 6,000 ರೂ. ಮೌಲ್ಯದ ಆರ್ಥಿಕ ನೆರವು ನೀಡಲು ಸರ್ಕಾರ ಘೋಷಿಸಿದೆ ಎಂದು ತಿಳಿಸಿದರು.


ಇದೇ ವೇಳೆ ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡ ಪಿಯುಶ್ ಗೋಯಲ್ "ಅರಮನೆಯಲ್ಲಿ ವಾಸಿಸುವವರು ಪ್ರತಿ ನಾಲ್ಕು ತಿಂಗಳುಗಳಿಗೊಮ್ಮೆ ಸಿಗುವ 2,000 ರೂ.ಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇಂತಹ ಕ್ರಮಕ್ಕೆ ಅವರು ವಿರುದ್ದವಾಗಿದ್ದಾರೆ ಎಂದು ಕಿಡಿಕಾರಿದರು.