ಲೋಕ ಸಮರ 2019: ಆರನೇ ಹಂತದಲ್ಲಿ ಮತದಾನದ ಹಕ್ಕು ಚಲಾಯಿಸಿದ ವಿರಾಟ್ ಕೊಹ್ಲಿ, ಪ್ರಗ್ಯಾ, ಗೌತಮ್ ಗಂಭೀರ್
ಲೋಕ ಸಮರದ 6ನೇ ಹಂತದ ಮತದಾನದಲ್ಲಿ 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.
ನವದೆಹಲಿ: ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಮತದಾರರು ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸುತ್ತಿದ್ದಾರೆ.
ಏತನ್ಮಧ್ಯೆ, ಟಿಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಹರಿಯಾಣದಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಹರಿಯಾಣದ ಗುರುಗ್ರಾಮದ ಪೈನ್ಕ್ರೆಸ್ಟ್ ಶಾಲೆಯ ಪೋಲಿಂಗ್ ಬೂತ್ಗೆ ಆಗಮಿಸಿದ ಕೊಹ್ಲಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು.
ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ಸಹ ಬೆಳಿಗ್ಗೆಯೇ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಈ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಪಕ್ಷದಿಂದ ದಿಗ್ವಿಜಯ್ ಸಿಂಗ್ ಸ್ಪರ್ಧಿಸಿದ್ದಾರೆ.
ಇನ್ನು ಪೂರ್ವ ದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ರಾಜಿಂದರ್ ನಗರದ ಮತಕೇಂದ್ರದಲ್ಲಿ ಮತದಾನದ ಹಕ್ಕು ಚಲಾಯಿಸಿದರು. ಈ ಕ್ಷೇತ್ರದಲ್ಲಿ ಗಂಭೀರ್ ಪ್ರತಿಸ್ಪರ್ಧಿಗಳಾಗಿ ಎಎಪಿ ಅಭ್ಯರ್ಥಿ ಆತಿಶಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅರವಿಂದರ್ ಸಿಂಗ್ ಲವ್ಲಿ ಕಣದಲ್ಲಿದ್ದಾರೆ.
ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನದಲ್ಲಿ 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಒಟ್ಟು 979 ಅಭ್ಯರ್ಥಿಗಳು ಕಣದಲ್ಲಿದ್ದು, 10.17 ಕೋಟಿ ಮತದಾರರು ಈ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ಉತ್ತರಪ್ರದೇಶದ 14, ಹರಿಯಾಣದ 10, ಬಿಹಾರ, ಮಧ್ಯಪ್ರದೇಶ ಮತ್ತು ಪ.ಬಂಗಾಲದ ತಲಾ 8, ದಿಲ್ಲಿಯ 7 ಮತ್ತು ಜಾರ್ಖಂಡ್‌ನ 4 ಕ್ಷೇತ್ರಗಳನ್ನೊಳಗೊಂಡಂತೆ ಒಟ್ಟು 59 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.