ನವದೆಹಲಿ: ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ದಿನಾಂಕವನ್ನು ಶೀಘ್ರದಲ್ಲಿಯೇ ಚುನಾವಣಾ ಆಯೋಗ ಪ್ರಕಟಿಸಲಿದ್ದು, 7 ರಿಂದ 8 ಹಂತಗಳಲ್ಲಿ ದೇಶಾದ್ಯಂತ ಚುನಾವಣೆ ನಡೆಯುವ ಸಾಧ್ಯತೆಯಿದೆ.


COMMERCIAL BREAK
SCROLL TO CONTINUE READING

ಈಗಾಗಲೇ 17ನೇ ಲೋಕಸಭಾ ಚುನಾವಣೆಗೆ ಅಗತ್ಯವಾದ ಅಂತಿಮ ಹಂತದ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಳ್ಳುತ್ತಿದ್ದು, ಈ ತಿಂಗಳ ಅಂತ್ಯದಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದದಲ್ಲಿ ಲೋಕಸಭಾ ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯ ವೇಳಾಪಟ್ಟಿ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.


ಪ್ರಸ್ತುತ ಲೋಕಸಭೆಯ ಕಾರ್ಯಾವಧಿ ಜೂನ್ 3ಕ್ಕೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಚುನಾವಣೆ ಎಷ್ಟು ಹಂತಗಳಲ್ಲಿ ನಡೆಯಲಿದೆ ಎಂಬ ಘೋಷಣೆಯ ಬಳಿಕ ಎರಡನೇ ಹಂತದ ಮತದಾನಕ್ಕಾಗಿ ಚುನಾವಣಾ ವೀಕ್ಷಕರ ಸಭೆ ನಡೆಯಲಿದೆ.


ಈ ಬಗ್ಗೆ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು  ಮಾಹಿತಿ ನೀಡಿದ್ದು, ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನದ ಪ್ರಕಟಣೆಯನ್ನು ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಹೊರಡಿಸಲಿದ್ದು, ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳೂ ಸಹ ಅದೇ ದಿನಾಕದಂದು ನಡೆಯುವ ಸಾಧ್ಯತೆಯಿದೆ ಎಂದಿದ್ದಾರೆ.


ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ರಾಜ್ಯಗಳ ವಿಧಾನಸಭೆ ಚುನಾವಣೆಯೂ ಸಹ ಲೋಕಸಭಾ ಚುನಾವಣೆಯೊಂದಿಗೇ ನಡೆಯುವ ಸಾಧ್ಯತೆಯಿದೆ.