ನವದೆಹಲಿ: ಕೇರಳದ 26 ವರ್ಷದ ಯುವತಿ ಹಾದಿಯಾ(ಮೂಲತಃ ಹಿಂದೂ) 2016 ರಲ್ಲಿ ಮುಸ್ಲಿಂ ಯುವಕನನ್ನು ಮದುವೆಯಾಗಲು ಬಯಸಿದಾಗ ಆಕೆಯ ತಂದೆ ಕೆ.ಎಂ. ಅಶೋಕನ್ ಅದನ್ನು ವಿರೋಧಿಸಿದ್ದರು. ಈ ಬಗ್ಗೆ ಕೋರ್ಟ್ ಮೆಟ್ಟಿಲೆರಿದ್ದ ಆತ ತನ್ನ ಮಗಳು 'ಲವ್ ಜಿಹಾದ್' ಗೆ ಒಳಗಾಗಿದ್ದಾಳೆ ಹೇಳಿದ್ದರು. ಲವ್ ಜಿಹಾದ್ ಪ್ರಕರಣದ ಮೂಲಕ ದೇಶದಾದ್ಯಂತ ಸಂಚಲನ ಮೂಡಿಸಿದ್ದ ಅದೇ ಹಾದಿಯಾ ತಂದೆ ಇದೀಗ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದಾರೆ.



COMMERCIAL BREAK
SCROLL TO CONTINUE READING

ತಿರುವನಂತಪುರದಲ್ಲಿಂದು ಕೇರಳ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಹಾದಿಯಾ ಅವರ ತಂದೆ ಕೆ.ಎಂ. ಅಶೋಕನ್ ಬಿಜೆಪಿ ಪಕ್ಷ ಸೇರಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದಕ್ಕೂ ಮೊದಲು ನಾನು ಕಮ್ಯುನಿಸ್ಟ್ ಪಕ್ಷದಲ್ಲಿದ್ದೆ. ಆದರೆ ಪಕ್ಷದ ಸಿದ್ಧಾಂತಗಳು ಮತ್ತು ಅಜೆಂಡಾಗಳು ಇಷ್ಟವಾಗದೇ ಅಲ್ಲಿಂದ ಹೊರನಡೆದೆ. ನಾನು ಕಳೆದ ಮೂರು ವರ್ಷಗಳ ಹಿಂದೆಯೇ ಬಿಜೆಪಿ ಸೇರ್ಪಡೆಯಾಗಿದ್ದೆ. ಆದರೆ ಈಗ ನನಗೆ ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಸಿಕ್ಕಿದೆ ಎಂದು ಹೇಳಿದರು. 


ಏನಿದು 'ಲವ್ ಜಿಹಾದ್' ಪ್ರಕರಣ:
ಅಶೋಕನ್ ಪುತ್ರಿ ಅಖಿಲಾ ಅಶೋಕನ್ ಶಫೀನ್ ಜಹಾನ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಆತನನ್ನು ಮದುವೆಯಾಗಿದ್ದರು. ವಿವಾಹದ ಬಳಿಕ ಆಕೆ ಹಾದಿಯಾ ಎಂದು ಹೆಸರು ಬದಲಿಸಿಕೊಂಡಿದ್ದಳು. ಈ ಮತಾಂತರ ಮತ್ತು ವಿವಾಹವನ್ನು ವಿರೋಧಿಸಿದ್ದ ಅಶೋಕನ್, ಇದೊಂದು ಲವ್ ಜಿಹಾದ್ ಪ್ರಕರಣ. ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಕೆಲ ಗುಂಪುಗಳು ಆಕೆಯನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿವೆ. ನನ್ನ ಪುತ್ರಿಯ ವಿವಾಹವನ್ನು ರದ್ದು ಮಾಡಿ ಎಂದು ಕೋರ್ಟ್ ಮೆಟ್ಟಿಲೇರಿದ್ದರು. 


ಈ ವರ್ಷ ಮಾರ್ಚ್ 8 ರಂದು ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್ ಹಾದಿಯಾ ಮದುವೆಯನ್ನು ಎತ್ತಿಹಿಡಿಯುವ ಮೂಲಕ ಹಾದಿಯಾ ಪರವಾಗಿ ತೀರ್ಪು ನೀಡಿತ್ತು. ಇದಕ್ಕೂ ಕೇರಳ ಹೈಕೋರ್ಟ್ ಈ ಮದುವೆಯನ್ನು ರದ್ದುಗೊಳಿಸಿತ್ತು. ಆದರೆ ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಲಯ, ಇಬ್ಬರು ವಯಸ್ಕರು ಮದುವೆಯಾದಾಗ ಅಲ್ಲಿ ಯಾವುದೇ ಮಧ್ಯ ಪ್ರವೇಶ ಇರಬಾರದು ಎಂದು ಹೇಳಿತ್ತು. ಆದರೆ ಎನ್ಐಎ ಲವ್ ಜಿಹಾದ್ ಪ್ರಕರಣದಲ್ಲಿ ತನ್ನ ತನಿಖೆ ಮುಂದುವರಿಸಬಹುದು ಎಂದು ಹೇಳಿತ್ತು.