ಲಕ್ನೋ: ಕಸದ ವಿಲೇವಾರಿ ಬಗ್ಗೆ ಸಾಕಷ್ಟು ಬಾರಿ ತಿಲಿಸಲಾಗಿದ್ದರೂ, ಹಲವಾರು ಬಾರಿ ನೋಟೀಸ್ ನೀಡಿದ್ದರೂ ಜನರಿಂದ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ಅಧಿಕಾರಿಗಳು ಇಡೀ ಪ್ರದೇಶದ ಜನರ ವಿರುದ್ಧ ಎಫ್ಐಆರ್ ದಾಖಲಿಸಿರುವ ಘಟನೆ ಉತ್ತರಪ್ರದೇಶದ ರಾಜಧಾನಿ ಲಕ್ನೋದ ಮೋಹನ್‌ಲಾಲ್‌ಗಂಜ್ನಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಸ್ಮಾರ್ಟ್ ಸಿಟಿಯ ಓಟದಲ್ಲಿ ಭಾಗಿಯಾಗಿರುವ ಲಕ್ನೋ ನಗರದಲ್ಲಿ ಕಸ ಹರಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು, ಪ್ರದೇಶದಲ್ಲಿ ಬೇಕಾಬಿಟ್ಟಿ ಕಸ ಬಿಸಾಡುವ ಮೂಲಕ ಕೊಳಕು ಹರಡಿರುವ ಕಾರಣ ಮೋಹನ್‌ಲಾಲ್‌ಗಂಜ್ ಪಟ್ಟಣದಲ್ಲಿ ವಾಸಿಸುವವರ ವಿರುದ್ಧ ಪ್ರಕರಣ ದಾಖಲಾಗಿದೆ. 


ಮಾಹಿತಿಯ ಪ್ರಕಾರ, ಸಂಕತ್ ಮೋಚನ್ ಮಂದಿರ ಬಸ್ತಿಯಲ್ಲಿ ಅಪಾರ ಕೊಳಕು ಹರಡಿರುವ ಕಾರಣ ಪ್ರದೇಶದ ಸುಮಾರು 55 ಕುಟುಂಬಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ತಹಸಿಲ್ ದಿನದಂದು, ಟೌನ್‌ಶಿಪ್‌ನಲ್ಲಿ ನೀರು ಹರಿಯುವ ಬಗ್ಗೆ ಮತ್ತು ಸುತ್ತಲೂ ಕೊಳಕು ಹರಡಿರುವ ಬಗ್ಗೆ ಡಿಎಂಗೆ ದೂರು ನೀಡಲಾಯಿತು.


ಹಲವಾರು ಬಾರಿ ಕಸದ ಅವ್ಯವಸ್ಥೆಗೆ ಕಾರಣರಾದವರ ವಿರುದ್ಧ ಬ್ಲಾಕ್ ಆಡಳಿತ ಕೂಡ ನೋಟಿಸ್ ನೀಡಿತ್ತು. ಆದರೆ ಆಡಳಿತದ ನೋಟೀಸ್ ಗೆ ಜನ ಕವಡೆ ಕಾಸಿನ ಕಿಮ್ಮತ್ತು ನೀಡದೆ ಕಸ ಹರಡುವ ಚಾಳಿ ಬಿಡದ ಕಾರಣ ಬಿಡಿಒ ಅವರು ಪ್ರಕರಣ ದಾಖಲಿಸಿದ್ದಾರೆ.


ತಹಸಿಲ್ ದಿನದಂದು ನಮ್ಮ ಸಮಸ್ಯೆಯನ್ನು ಪರಿಹಾರ ಸಿಗುವ ನಿರೀಕ್ಷೆಯಲ್ಲಿ ಡಿಎಂ ಮುಂದೆ ನಮ್ಮ ವಾಸ್ತವ ಸಮಸ್ಯೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಈ ರೀತಿ ಕಸ ಹಾಕಲಾಗಿತ್ತು. ಆದರೆ ನಮ್ಮ ಸಮಸ್ಯೆಯನ್ನು ಬಗೆಹರಿಸುವ ಬದಲಿಗೆ ದೂರು ದಾಖಲಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.


ಇಡೀ ಮೋಹನ್ ಲಾಲ್ ಗಂಜ್ ಪ್ರದೇಶದ ಕಸವನ್ನು ಈ ಪ್ರದೇಶದಲ್ಲಿ ಇರುವ ಕೊಳದಲ್ಲಿ ಎಸೆಯಲಾಗುತ್ತದೆ, ಇದರಿಂದಾಗಿ ರೋಗಗಳು ಹರಡಿ ಸಾವಿಗೂ ಕಾರಣವಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ, ಮಳೆಗಾಲದಲ್ಲಿ ನೀರು ಹರಿಯುವ ಸಮಸ್ಯೆಯಿಂದ ಜನರು ತೊಂದರೆಗೀಡಾಗಿದ್ದಾರೆ. ಆದರೆ ಇದರ ಬಗ್ಗೆ ಮಾತನಾಡುವವರು ಯಾರೂ ಇಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.


ಎಫ್‌ಐಆರ್ ದಾಖಲಿಸಿದ ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ ಭೋಲನಾಥ್ ಕನ್ನೌಜಿಯಾ, ಬ್ಲಾಕ್ ಆಡಳಿತವು ಹಲವಾರು ಬಾರಿ ಹೊಲಸು ಹರಡುವವರಿಗೆ ನೋಟಿಸ್ ನೀಡಿದೆ ಆದರೆ ಸುಧಾರಿಸದ ಕಾರಣ ಸ್ಥಳೀಯ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎನ್ನುತ್ತಾರೆ.


ಲಕ್ನೋದಲ್ಲಿ ಕೊಳಕು ಹರಡಿದ್ದಕ್ಕಾಗಿ ಇಡೀ ಪ್ರದೇಶದ ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ ಮೊದಲ ಪ್ರಕರಣ ಇದು. ವಿಶೇಷವೆಂದರೆ, ಈ ಹಿಂದೆ ಈ ಆದೇಶವನ್ನು ಮುನ್ಸಿಪಲ್ ಕಾರ್ಪೋರೇಶನ್ ಮನೆಯ ಹೊರಗೆ ಕಸ ಎಸೆಯುವವರ ವಿರುದ್ಧ ಪ್ರಕರಣ ದಾಖಲಿಸಿದರೆ ಕ್ರಮ ಕೈಗೊಳ್ಳುತ್ತಿತ್ತು.