ಲಕ್ನೋ: ಕಾರು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಆಪಲ್ ಸ್ಟೋರ್ ಸೇಲ್ಸ್ ಮ್ಯಾನೇಜರ್ ಮೇಲೆ ಉತ್ತರ ಪ್ರದೇಶ ಪೋಲಿಸ್ ಪೇದೆ ಗುಂಡು ಹಾರಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉತ್ತರ ಪ್ರದೇಶದ ನೀರಾವರಿ ಸಚಿವ ಧರ್ಮಪಾಲ್‌ ಸಿಂಗ್‌ ಹೇಳಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಪೋಲೀಸರ ಆದೇಶಕ್ಕೆ ಅನುಗುಣವಾಗಿ ಕಾರು ನಿಲ್ಲಿಸದೆ ಪೊಲೀಸರ ಮೋಟಾರು ಸೈಕಲ್‌ ಮೇಲೆ ಮೂರು ಬಾರಿ ಕಾರು ಹರಿಸಲು ಯತ್ನಿಸಿ, ಅಂತಿಮವಾಗಿ ಪೊಲೀಸರ ಗುಂಡಿಗೆ ಬಲಿಯಾದ ಆ್ಯಪಲ್‌ ಸೇಲ್ಸ್‌ ಮ್ಯಾನೇಜರ್‌ ವಿವೇಕ್‌ ತಿವಾರಿ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಸಚಿವ ಧರ್ಮಪಾಲ್‌ ಸಿಂಗ್‌ ''ಪೊಲೀಸ್‌ ಎನ್ಕೌಂಟರ್‌ನಲ್ಲಿ ಯಾವುದೇ ತಪ್ಪಿಲ್ಲ; ಪೊಲೀಸರು ಕೇವಲ ಕ್ರಿಮಿನಲ್‌ಗ‌ಳ ಮೇಲೆ ಮಾತ್ರವೇ ಗುಂಡು ಹಾರಿಸುತ್ತಾರೆ. ತಪ್ಪು ಯಾರೇ ಎಸಗಿದರೂ ಅವರಿಗೆ ಶಿಕ್ಷೆ ಆಗಿಯೇ ಆಗುತ್ತದೆ'' ಎಂದು ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 



ಶುಕ್ರವಾರ ತಡರಾತ್ರಿ ಮಹಿಳಾ ಸಹೋದ್ಯೋಗಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಆಪಲ್ ಸ್ಟೋರ್ ಉದ್ಯೋಗಿ ವಿವೇಕ್ ತಿವಾರಿ, ಮಾರ್ಗ ಮಧ್ಯದಲ್ಲಿ ಪೊಲೀಸರು ಕಾರು ನಿಲ್ಲಿಸುವಂತೆ ಸೂಚನೆ ನೀಡಿದರೂ, ನಿಲ್ಲಿಸದೆ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದರು ಎನ್ನಲಾಗಿದೆ. ಈ ವರ್ತನೆಯಿಂದ ಅನುಮಾನಗೊಂಡ ಪೇದೆ ಚೌದರಿ ತಿವಾರಿ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಕಾರು ಅಂಡರ್ ಪಾಸ್ ಪಿಲ್ಲರ್'ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯವಾಗಿದ್ದ ಉದ್ಯೋಗಿ ತಿವಾರಿಗೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.


ಈ ಪ್ರಕರಣ ಸಂಬಂಧ ಉತ್ತರ ಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡವನ್ನು ರೂಪಿಸಿದ್ದು, ಪೊಲೀಸ್‌ ಅಧೀಕ್ಷಕರೊಬ್ಬರು ಈ ತಂಡದ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ. 


"ನನ್ನದೇನೂ ತಪ್ಪಿಲ್ಲ, ನಾನು ಜೀವ ರಕ್ಷಣೆಗಾಗಿ ಗುಂಡು ಹಾರಿಸಿದೆ. ಏಕೆಂದರೆ ಆತ ಮೂರು ಬಾರಿ ತನ್ನ ಕಾರನ್ನು ನಮ್ಮ ಮೋಟಾರು ಸೈಕಲ್‌ ಮೇಲೆ ಹರಿಸಿ ನಮ್ಮನ್ನು ಸಾಯಿಸಲು ಯತ್ನಿಸಿದ' ಎಂದು ತಿವಾರಿಗೆ ಗುಂಡು ಹಾರಿಸಿದ ಪೊಲೀಸ್‌ ಪೇದೆ ಹೇಳಿಕೆ ನೀಡಿದ್ದಾರೆ.


ಮತ್ತೊಂದೆಡೆ, ಮೃತ ವಿವೇಕ್ ತಿವಾರಿ ಪತ್ನಿ ಕಲ್ಪನಾ ತಿವಾರಿ, "ಪೊಲೀಸರಿಗೆ ನನ್ನ ಪತಿಯನ್ನು ಕೊಲ್ಲುವ ಯಾವುದೇ ಅಧಿಕಾರ ಇಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕು.  ಈ ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಯಬೇಕು,  ತನಗೆ 1 ಕೋಟಿ ರೂ. ಪರಿಹಾರ ನೀಡಬೇಕು ಮತ್ತು ತನಗೆ ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಕೊಡಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಪತ್ರ ಬರೆದಿದ್ದಾರೆ.



ಏತನ್ಮಧ್ಯೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಸಹ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ಅಗತ್ಯ ಬಿದ್ದರೆ ಸಿಬಿಐ ತನಿಖೆಗೆ ಆದೇಶಿಸುವುದಾಗಿ ಹೇಳಿದ್ದಾರೆ.