ರಾಜೀವ್ ಗಾಂಧಿ ಹತ್ಯೆ: ಅಪರಾಧಿ ನಳಿನಿಗೆ ನೀಡಿದ್ದ ಪೆರೋಲ್ ವಿಸ್ತರಣೆಗೆ ಹೈಕೋರ್ಟ್ ನಕಾರ
ಮಗಳ ಮದುವೆಗೆ ಸಂಪೂರ್ಣ ವ್ಯವಸ್ಥೆ ಮಾಡಲು ವಿಸ್ತರಣೆ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಗಸ್ಟ್ 22ರಂದು ನಳಿನಿಗೆ ನೀಡಿದ್ದ ಪೆರೋಲ್ ಅನ್ನು ಮೂರು ವಾರಗಳವರೆಗೆ ವಿಸ್ತರಿಸಿತ್ತು.
ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಳಿನಿ ಶ್ರೀಹರನ್ ಅವರಿಗೆ ನೀಡಿದ್ದ ಪೆರೋಲ್ ವಿಸ್ತರಿಸಲು ಮದ್ರಾಸ್ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ತಮಗೆ ನೀಡಿರುವ ಪೆರೋಲ್ ಅನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸುವಂತೆ ನಳಿನಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ಎಂ.ಸುಂದ್ರೆಶ್ ಮತ್ತು ನ್ಯಾಯಮೂರ್ತಿ ಟೀಕಾ ರಾಮನ್ ಅವರ ವಿಭಾಗೀಯ ಪೀಠವು ಪೆರೋಲ್ ಅವಧಿ ವಿಸ್ತರಣೆಗೆ ನಿರಾಕರಿಸಿದೆ.
ಮಗಳ ಮದುವೆಗೆ ಸಂಪೂರ್ಣ ವ್ಯವಸ್ಥೆ ಮಾಡಲು ವಿಸ್ತರಣೆ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಗಸ್ಟ್ 22ರಂದು ನಳಿನಿಗೆ ನೀಡಿದ್ದ ಪೆರೋಲ್ ಅನ್ನು ಮೂರು ವಾರಗಳವರೆಗೆ ವಿಸ್ತರಿಸಿತ್ತು.
ಕಳೆದ 28 ವರ್ಷಗಳಿಂದ ಜೈಲಿನಲ್ಲಿರುವ ನಳಿನಿ ಅವರನ್ನು ಜುಲೈ 25 ರಂದು ವೆಲ್ಲೂರ್ ಕೇಂದ್ರ ಕಾರಾಗೃಹದಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.
ನಳಿನಿಯವರ ಪುತ್ರಿ ಚರಿತ್ರಾ ಶ್ರೀಹರನ್ ಜೈಲಿನಲ್ಲಿ ಜನಿಸಿದ್ದು, ಪ್ರಸ್ತುತ ಲಂಡನ್‌ನಲ್ಲಿ ವೈದ್ಯಕೀಯ ವೈದ್ಯರಾಗಿದ್ದಾರೆ. ಈ ಪ್ರಕರಣದಲ್ಲಿ ನಳಿನಿ ಮತ್ತು ಇತರ ಆರು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.