ಮಾಜಿ ಡಿಜಿಪಿ ವಿರುದ್ಧ ಕೇಸ್ ದಾಖಲಿಸಿ 26 ವರ್ಷದ ಕಾನೂನು ಹೋರಾಟ ಗೆದ್ದಿದ್ದ ಮಧು ಆನಂದ್ ..!
ಇತ್ತೀಚಿಗೆ ಯೋಗೇಂದ್ರ ಯಾದವ್ ನೇತ್ರುತ್ವದ ಸ್ವರಾಜ್ ಇಂಡಿಯಾ ಪಕ್ಷ ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಮಧು ಆನಂದ್ ಪ್ರಕಾಶ್ ಅವರನ್ನು ಪಂಚಕುಲದ ಸ್ವರಾಜ್ ಇಂಡಿಯಾದ ವಿಧಾನಸಭಾ ಅಭ್ಯರ್ಥಿಯಾಗಿ ಘೋಷಿಸಿದೆ.
ನವದೆಹಲಿ: ಇತ್ತೀಚಿಗೆ ಯೋಗೇಂದ್ರ ಯಾದವ್ ನೇತ್ರುತ್ವದ ಸ್ವರಾಜ್ ಇಂಡಿಯಾ ಪಕ್ಷ ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಮಧು ಆನಂದ್ ಪ್ರಕಾಶ್ ಅವರನ್ನು ಪಂಚಕುಲದ ಸ್ವರಾಜ್ ಇಂಡಿಯಾದ ವಿಧಾನಸಭಾ ಅಭ್ಯರ್ಥಿಯಾಗಿ ಘೋಷಿಸಿದೆ.
ಯಾರು ಈ ಮಧು ಆನಂದ್ ?
ಮಧು ಆನಂದ್ ಹಾಗೂ ಅವರ ಪತಿ ಆನಂದ್ ಪ್ರಕಾಶ್ ಅವರು ಮೊದಲ ಬಾರಿಗೆ ರುಚಿಕಾ ಗಿರ್ಹೊತ್ರಾ ಪ್ರಕರಣದಲ್ಲಿ ರಾಷ್ಟ್ರಾದ್ಯಂತ ಬೆಳಕಿಗೆ ಬಂದರು.1990 ರಲ್ಲಿ ಮಧು ಆನಂದ್ ಆಗಿನ ಡಿಜಿಪಿ ಎಸ್‌ಪಿಎಸ್ ರಾಥೋಡ್ 14 ವರ್ಷದ ಬಾಲಕಿ ರುಚಿಕಾ ಗಿರ್ಹೊತ್ರಾಗೆ ನೀಡಿದ ಕಿರುಕುಳದ ವಿರುದ್ಧವಾಗಿ ಸಿಡಿದೆದ್ದರು. ಈ ಪ್ರಕರಣದಲ್ಲಿ ಮಧು ಆನಂದ್ ಅವರ ಪುತ್ರಿ ಪ್ರಮುಖ ಸಾಕ್ಷಿಯಾಗಿದ್ದರು. ತಾಯಿ ಇಲ್ಲದ ತಬ್ಬಲಿಯಂತಿದ್ದ ರುಚಿಕಾ ಗಿರ್ಹೊತ್ರಾ ಪರವಾಗಿ ಮಧು ಆನಂದ್ ಡಿಜಿಪಿ ಎಸ್‌ಪಿಎಸ್ ರಾಥೋಡ್ ವಿರುದ್ಧ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಏಕ ಮಾತ್ರ ಸಾಕ್ಷಿಯಾಗಿದ್ದ ಅವರ ಪುತ್ರಿಯೂ ಕೂಡ ಅಷ್ಟೇ ಧೃಡವಾಗಿ ನಿಂತಿದ್ದರು. ಮಧು ಆನಂದ್ ಅವರ ಸುದೀರ್ಘ ಹೋರಾಟದ ಫಲವಾಗಿ ರಾಥೋಡ್ ಅಂತಿಮವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2009 ರಲ್ಲಿ 18 ತಿಂಗಳ ಜೈಲು ಶಿಕ್ಷೆ ನೀಡಿತು. ಮುಂದೆ ಈ ಪ್ರಕರಣ ಪಂಜಾಬ್ ಹೈಕೋರ್ಟ್ ನಿಂದ ಸುಪ್ರೀಂಕೋರ್ಟ್ ವರೆಗೂ ತಲುಪಿತು. 2016 ರಲ್ಲಿ ರಾಥೋಡ್ ಅವರ ಮೇಲಿನ ಆರೋಪವನ್ನು ಕೋರ್ಟ್ ಎತ್ತಿ ಹಿಡಿಯಿತು. ಆ ಮೂಲಕ 26 ವರ್ಷಗಳ ಕಾನೂನು ಹೋರಾಟ ತಾರ್ಕಿಕ ಅಂತ್ಯ ಕಂಡಿತು.
ಸಾಮಾಜಿಕ ಹೋರಾಟದಿಂದ ಚುನಾವಣಾ ಕಣಕ್ಕೆ:
ಐತಿಹಾಸಿಕ ಕಾನೂನು ಹೋರಾಟದ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದ ಮಧು ಆನಂದ್ ಶೋಷಿತರ ಹಾಗೂ ಮಹಿಳೆಯರ ಪರವಾಗಿನ ಹೋರಾಟದಲ್ಲಿ ಇಂದಿಗೂ ಸಕ್ರೀಯರಾಗಿದ್ದಾರೆ. ಮಹಿಳಾ ಸಶಕ್ತೀಕರಣದ ದೊಡ್ಡ ಧ್ವನಿಯಾಗಿರುವ ಮಧು ಆನಂದ್ ಈಗ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷ ಅಭ್ಯರ್ಥಿಯಾಗಿ ಪಂಚಕುಲದಿಂದ ಕಣಕ್ಕೆ ಇಳಿದಿದ್ದಾರೆ. ಸಾಮಾಜಿಕ ಹೋರಾಟದಿಂದ ಈಗ ಚುನಾವಣಾ ಕಣಕ್ಕೆ ಇಳಿದಿರುವ ಮಧು ಆನಂದ್ ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತಾ 'ವಿಧಾನಸಭಾ ಸದಸ್ಯೆಯಾದಲ್ಲಿ ಮಹಿಳೆಯರ ರಕ್ಷಣೆ, ಸಬಲೀಕರಣ ಹಾಗೂ ಶೋಷಿತ ಸಮುದಾಯಗಳ ಏಳಿಗೆಗಾಗಿ ಶ್ರಮಿಸುತ್ತೇನೆ' ಎಂದು ಹೇಳಿದರು.
ಪಂಚಕುಲ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಣಾಳಿಕೆ ಬಗ್ಗೆ ಮಾತನಾಡಿದ ಮಧು ಆನಂದ್ 'ಪಂಚಕುಲಕ್ಕೆ ಸಂಬಂಧಿದಂತೆ ಯಾವುದೇ ಪ್ರಣಾಳಿಕೆಯನ್ನು ನಿಗದಿಪಡಿಸಿಲ್ಲ, ಆದಾಗ್ಯೂ ನಾನು ಸಮಾಜದಲ್ಲಿ ಶೋಷಿತ ಜನ ಸಮುದಾಯದ ಪರವಾಗಿ ಶ್ರಮಿಸಲಿದ್ದೇನೆ ಎಂದರು. ಇದೇ ವೇಳೆ ತಮ್ಮ ಪ್ರತಿಸ್ಪರ್ಧಿ ಬಗ್ಗೆ ಪ್ರತಿಕ್ರಿಯಿಸಿದ ಅವರು ' ನಾನು ವಿಷಯಗಳ ಕೇಂದ್ರಿತ ರಾಜಕಾರಣವನ್ನು ಮಾಡುತ್ತೇನೆ ಹೊರತು ರಾಜಕಾರಣಿಗಳ ಹೆಸರಿಡಿದು ಟೀಕಿಸಲು ಹೋಗುವುದಿಲ್ಲ' ಎಂದರು. ಮಧು ಆನಂದ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿ ಪತ್ರಿಕಾ ಹೇಳಿಕೆ ನೀಡಿರುವ ಸ್ವರಾಜ್ ಇಂಡಿಯಾ 'ನಮ್ಮ ಪಕ್ಷಕ್ಕೆ ಅಂತಹ ಮಹಿಳೆಯ ಬಗ್ಗೆ ಹೆಮ್ಮೆ ಇದೆ, ಆದ್ದರಿಂದ ಅವರನ್ನು ಹರ್ಯಾಣ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಾಗುವುದು' ಎಂದು ತಿಳಿಸಿದೆ.