ನವದೆಹಲಿ​: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತಎಣಿಕೆ ಕ್ಷಣ ಕ್ಷಣಕ್ಕೂ ಭಾರೀ ಕುತೂಹಲ ಮೂಡಿಸಿದ್ದು, ಕಾಂಗ್ರೆಸ್-ಬಿಜೆಪಿ ನಡುವಿನ ಹಾವು ಏಣಿ ಆಟ ಮುಂದುವರೆದಿದೆ. ಒಮ್ಮೆ ಬಿಜೆಪಿ 110 ಸ್ಥಾನಗಳನ್ನು ಪಡೆದು ಮುನ್ನಡೆ ಸಾಧಿಸಿದರೆ ಮತ್ತೊಮ್ಮೆ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ. 


COMMERCIAL BREAK
SCROLL TO CONTINUE READING

ಇತರ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ, ಆಡಳಿತಾರೂಢ ಬಿಜೆಪಿ-ಕಾಂಗ್ರೆಸ್ ಮಧ್ಯೆ ಮಧ್ಯಪ್ರದೇಶದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಳೆದ 13 ವರ್ಷಗಳಿಂದ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿರುವ ಶಿವರಾಜ್‌ ಸಿಂಗ್ ಚೌಹಾಣ್‌ ಮತ್ತೆ ಮುಖ್ಯಮಂತ್ರಿ ಆಗುವ ವಿಶ್ವಾಸದಲ್ಲಿದ್ದರೆ, ಕಾಂಗ್ರೆಸ್‌ ಈ ಬಾರಿ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಅಂತ್ಯಗೊಳಿಸಲು ಪಣ ತೊಟ್ಟಿದೆ. 


ಮತಎಣಿಕೆ ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ಬಿಜೆಪಿ ಇನ್ನೇನು ನೂರರ ಗಡಿದಾಟಿತು ಎನ್ನುವಾಗಲೇ ಕಾಂಗ್ರೆಸ್​ ಮ್ಯಾಜಿಕ್​ ನಂಬರ್ ತಲುಪಿ ಸರ್ಕಾರ ರಚನೆಯ ವಿಶ್ವಾಸ ವ್ಯಕ್ತಪಡಿಸಿತು. ಇನ್ನೇನು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎನ್ನುತ್ತಿರುವಾಗಲೇ ಬಿಜೆಪಿ ಮುನ್ನಡೆ ಗಳಿಸುವ ಮೂಲಕ ಎರಡೂ ಪಕ್ಷದ ಕಾರ್ಯಕರ್ತರು ಮತ್ತು ದೇಶದ ಜನತೆಯಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.


ಸದ್ಯ ಮಧ್ಯಪ್ರದೇಶದಲ್ಲಿ ಬಿಜೆಪಿ 112 ಸ್ಥಾನಗಳನ್ನು ಪಡೆದು ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 107 ಸ್ಥಾನಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಬಿಎಸ್ಪಿ 4 ಕ್ಷೇತ್ರಗಳಲ್ಲಿ ಮತ್ತು ಇತರೆ 7 ಸ್ಥಾನಗಳ ಮುನ್ನಡೆ ಸಾಧಿಸಿವೆ. ಮಧ್ಯಪ್ರದೇಶದಲ್ಲಿ ಯಾವುದೇ ಪಕ್ಷ ಸರ್ಕಾರ ರಚನೆಗೆ 116 ಬಹುಮತವನ್ನು ಸಾಧಿಸಬೇಕಾಗಿದೆ. ಆದರೆ ಅಂತಿಮ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.