ಈ ರಾಜ್ಯದ ರೈತರಿಗೆ ಸಂತಸದ ಸುದ್ದಿ, ಮತ್ತೆ ಆರಂಭವಾಗಲಿದೆ ಸಾಲಮನ್ನಾ ಪ್ರಕ್ರಿಯೆ
ಚುನಾವಣಾ ನೀತಿ ಸಂಹಿತೆ ಮುಗಿದ ನಂತರ, ರೈತರ ಸಾಲ ಮನ್ನಾ ಪ್ರಕ್ರಿಯೆ ಮತ್ತೆ ಪ್ರಾರಂಭವಾಗಲಿದೆ.
ಭೋಪಾಲ್: ಮಧ್ಯಪ್ರದೇಶದ ಲೋಕಸಭೆ ಚುನಾವಣೆಯಲ್ಲಿ, ರಾಜ್ಯದ ರೈತರ ಸಾಲಮನ್ನಾ ಬಗ್ಗೆ ಬಿಜೆಪಿ ಮಾಡಿದ ಆರೋಪಗಳಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲು 21 ಲಕ್ಷ ರೈತರ ಸಾಲಮನ್ನಾ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ, ರೈತರ ಸಾಲ ಮನ್ನಾ ಪ್ರಕ್ರಿಯೆ ಮತ್ತೆ ಪ್ರಾರಂಭವಾಗಲಿದೆ ಎಂದು ಕಮಲ್ ನಾಥ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದ ಚೌಹಾಣ್, ಕಮಲ್ ನಾಥ್ ಸರ್ಕಾರವು ರೈತರ ಸಾಲಮನ್ನಾ ಭರವಸೆಯನ್ನು ಪೂರೈಸುವುದಿಲ್ಲ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮಂಗಳವಾರ ಪತ್ರ ಬರೆದಿರುವ ಮುಖ್ಯಮಂತ್ರಿ ಕಮಲ್ ನಾಥ್, "ಡಿಸೆಂಬರ್ 17, 2018 ರಂದು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಎರಡು ಲಕ್ಷ ರೈತರ ಸಾಲಮನ್ನಾಕ್ಕೆ ಆದೇಶ ನೀಡಲಾಯಿತು. ಅದರ ನಂತರ ರೈತರ ಖಾತೆಗಳಿಗೆ ಸಾಲದ ಮೊತ್ತವನ್ನು ಠೇವಣಿ ಮಾಡಲು ಪ್ರಾರಂಭಿಸಿದೆವು. ಇದರೊಂದಿಗೆ ಫೆಬ್ರವರಿ 22 ರಿಂದ ರೈತರಿಗೆ ಋಣಭಾರಮುಕ್ತ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತಿದೆ" ಎಂದು ವಿವರಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮಾರ್ಚ್ 10 ರವರೆಗೆ 21 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ. ಚುನಾವಣಾ ಆಯೋಗದಿಂದ ಅನುಮತಿ ಪಡೆದ ನಂತರ 4.83 ರೈತರ ಖಾತೆಗಳಿಗೆ ಸಾಲ ಮನ್ನಾ ಮೊತ್ತವನ್ನು ಠೇವಣಿ ಮಾಡಲಾಗಿದೆ. "ನೀತಿ ಸಂಹಿತೆಯ ನಂತರ, ಸಾಲ ಮನ್ನಾ ಪ್ರಕ್ರಿಯೆಯು ಮತ್ತೆ ಪ್ರಾರಂಭವಾಗುತ್ತದೆ. ರೈತರ ಸಾಲವನ್ನು ಮನ್ನಾ ಚುನಾವಣಾ ಪ್ರಣಾಳಿಕೆ ಅಥವಾ ಚುನಾವಣಾ ಭರವಸೆಯಲ್ಲ. ಅದು ನಮ್ಮ ವಚನ. ಅದನ್ನು ನಾವು ಪ್ರತಿ ಪರಿಸ್ಥಿತಿಯಲ್ಲಿಯೂ ಪೂರೈಸುತ್ತೇವೆ" ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.