ಬೆಂಗಳೂರು: ಬ್ರಿಟಿಷ್ ಕಾಲದ ಒಪ್ಪಂದಗಳೇ ರಾಜ್ಯಕ್ಕೆ ಮಾರಕವಾಗಿದ್ದು, ಆ ಒಪ್ಪಂದಗಳಲ್ಲಿ ಅಡಕವಾಗಿರುವ ಅಂಶಗಳನ್ನು ಪರಿಗಣಿಸದೇ ಈಗಿನ ಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಕಣಿವೆ ವ್ಯಾಪ್ತಿಯ ನಾಲ್ಕೂ ರಾಜ್ಯಗಳಿಗೆ ನೀರನ್ನು ಹಂಚಬೇಕು ಎಂದು ರಾಜ್ಯ ವಾದ ಮಂಡಿಸುತ್ತಿದೆ. ಆದರೆ ತಮಿಳುನಾಡು ಮಾತ್ರ 1924ರ ಒಪ್ಪಂದದ ಅನ್ವಯವೇ  ನೀರು ಹಂಚಿಕೆ ಮಾಡಬೇಕು ಅಂತಾ ಪಟ್ಟು ಹಿಡಿದಿದೆ. ಏನಿದು ಮದ್ರಾಸ್-ಮೈಸೂರು ಒಪ್ಪಂದ, ಅದರ ಪ್ರಮುಖ ಅಂಶಗಳೇನು ಎಂಬುದನ್ನು ತಿಳಿಯೋಣ.


COMMERCIAL BREAK
SCROLL TO CONTINUE READING

1892 ಹಾಗೂ 1924 ರ ಮದ್ರಾಸ್ – ಮೈಸೂರು ಒಪ್ಪಂದಗಳ ಪ್ರಮುಖ ಅಂಶಗಳು: 


* ಮೈಸೂರು ಸಂಸ್ಥಾನ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿರುವ ಕಾಮಗಾರಿಗಳನ್ನು ಹೊರತುಪಡಿಸಿ ಹೊಸ ನೀರಾವರಿ ಜಲಾಶಯಗಳನ್ನು ನಿರ್ಮಿಸತಕ್ಕದ್ದಲ್ಲ.


* ಒಂದು ವೇಳೆ ನಿರ್ಮಿಸಬೇಕಾದ ಸಂದರ್ಭದಲ್ಲಿ ಕಾಮಗಾರಿಯ ಪೂರ್ಣ ಮಾಹಿತಿಯನ್ನು ಮದ್ರಾಸ್ ಸರ್ಕಾರಕ್ಕೆ ಕಳುಹಿಸಬೇಕು. 


* ಮದ್ರಾಸ್ ಸರ್ಕಾರ ಒಪ್ಪಿಗೆ ಪಡೆದು ಹೊಸ ಜಲಾಶಯಗಳನ್ನು ಮೈಸೂರು ರಾಜ್ಯ ನಿರ್ಮಿಸಬೇಕು.


* ಮೈಸೂರು ಸರ್ಕಾರವು ಕನ್ನಂಬಾಡಿಯಲ್ಲಿ ಕಾವೇರಿ ನದಿ ಮೇಲೆ ಜಲಾಶಯವನ್ನು ನಿರ್ಮಿಸುವ ಪ್ರಸ್ತಾವವನ್ನು ರೂಪಿಸಿ 1892ರ ಒಪ್ಪಂದದ ಅನ್ವಯ ಮದ್ರಾಸ್ ಸರ್ಕಾರದ ಒಪ್ಪಿಗೆಯನ್ನು ಕೋರಿತು.


* ಆದರೆ ಈ ಯೋಜನೆಗೆ ಮದ್ರಾಸ್ ರಾಜ್ಯವು ನಿರಾಕರಿಸಿತು. ಪಟ್ಟು ಬಿಡದ ಮೈಸೂರು ರಾಜ್ಯ, ಆಣೆಕಟ್ಟಿನ ಅವಶ್ಯಕತೆಯನ್ನು ಮನವರಿಕೆ ಮಾಡಿತು.


* ನ್ಯಾಯಾಧಿಶರ ಮಧ್ಯಸ್ತಿಕೆಯಲ್ಲಿ ಮೈಸೂರು ಹಾಗೂ ಮದ್ರಾಸ್ ಸರ್ಕಾರಗಳ ನಡುವೆ ಮತ್ತೊಂದು ಒಪ್ಪಂದಕ್ಕೆ 1924 ರಂದು ಸಹಿ ಹಾಕಲಾಯಿತು. 


* 1924ರ ಒಪ್ಪಂದದ ಪ್ರಕಾರ   ಮೈಸೂರು ಸರ್ಕಾರ ಆಣೆಕಟ್ಟು ನಿರ್ಮಿಸಲು ಮದ್ರಾಸ್ ಸರ್ಕಾರ ಒಪ್ಪಿತು. ಅಲ್ಲದೇ  ಆಣೆಕಟ್ಟಿನ ಮೂಲಕ ಜೂನ್ ನಿಂದ ಜನವರಿ ತಿಂಗಳವರೆಗೂ ಬಿಡುಗಡೆ ಮಾಡಬೇಕಾಗಿರುವ ನೀರಿನ ಮೊತ್ತವನ್ನು ಸೂಚಿಸಿತು.


ಮದ್ರಾಸ್ ಪ್ರಾಂತ್ಯವು ಬ್ರಿಟಿಷರ ಆಳ್ವಿಕೆಯಲ್ಲಿದ್ದ ಕಾರಣ, ತಮಿಳುನಾಡಿಗೆ ಅನುಕೂಲ ಆಗುವ ಹಾಗೆ ನೀರಿನ ಹಂಚಿಕೆ ಮಾಡಲಾಯಿತು. ಆಗ ಮೈಸೂರು ಸರ್ಕಾರವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಹೆಚ್ಚಿನ ವಿರೋಧ ತೋರಿಸುವ ಶಕ್ತಿಯನ್ನು ಹೊಂದಿರಲಿಲ್ಲ. ಆದ್ದರಿಂದ ಬ್ರಿಟಿಷರ ಒಪ್ಪಂದಗಳಿಗೆ ತಲೆಬಾಗಲೇಬೇಕಾದ ಸ್ಥಿತಿ ಮೈಸೂರು ಸಂಸ್ಥಾನಕ್ಕೆ ಎದುರಾಯಿತು.