MAHA SHIVRATRI 2020: 117 ವರ್ಷಗಳ ಬಳಿಕ ಕೂಡಿ ಬರಲಿದೆ ಈ ಯೋಗ
ಈ ಬಾರಿಯ ಮಹಾಶಿವರಾತ್ರಿಯ ಶುಭ ಸಂದರ್ಭದಂದು ಶನಿ ಜೊತೆಗೆ ಚಂದ್ರ ಕೂಡ ಇರಲಿದ್ದು, ವಿಷಯೋಗ ನಿರ್ಮಾಣಗೊಳ್ಳಲಿದೆ ಎನ್ನಲಾಗಿದೆ.
ನವದೆಹಲಿ: ಹಿಂದೂ ಧರ್ಮದಲ್ಲಿ ಭಗವಾನ್ ಶಿವನ ಮೇಲೆ ಭಕ್ತಾದಿಗಳು ಅಪಾರ ಭಕ್ತಿ ಹೊಂದಿದ್ದಾರೆ. ಹೀಗಾಗಿ ದೇವಾದಿ ದೇವ ಮಹಾದೇವನಿಗೆ ಖುಷಿ ನೀಡುವ ಮತ್ತು ಶೃದ್ಧೆಯಿಂದ ಕೂಡಿದ ಮಹಾಶಿವರಾತ್ರಿ ವೃತಕ್ಕೆ ತುಂಬಾ ಮಹತ್ವ ನೀಡಲಾಗಿದೆ. ಆದರೆ, ಈ ಬಾರಿಯ ಮಹಾಶಿವರಾತ್ರಿ ಸ್ವಲ್ಪ ವಿಶೇಷವಾಗಿದೆ. ಏಕೆಂದರೆ, ಸುಮಾರು 117 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶನಿ ಹಾಗೂ ಶುಕ್ರ ಯೋಗ ಕೂಡಿ ಬರಲಿದೆ. ಹಾಗೆ ನೋಡಿದರೆ ಶಿವರಾತ್ರಿ (ಚತುರ್ದಶಿ) ಪ್ರತಿ ತಿಂಗಳಿಗೆ ಬರುತ್ತದೆ. ಆದರೆ, ಫಾಲ್ಗುಣಿ ಮಾಸದಲ್ಲಿ ಬರುವ ಮಹಾಶಿವರಾತ್ರಿಗೆ ವಿಶೇಷ ಮಹತ್ವ ನೀಡಲಾಗಿದೆ. ಈ ಬಾರಿ ಮಹಾಶಿವರಾತ್ರಿ ವೃತವನ್ನು ಫೆಬ್ರುವರಿ 21ಕ್ಕೆ ಆಚರಿಸಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಶಿವರಾತ್ರಿಯ ಶುಭ ದಿನದಂದು ಶನಿ ತನ್ನ ಮಕರರಾಶಿಯಲ್ಲಿ ಇರಲಿದ್ದಾನೆ. ಇತ್ತ ಶುಕ್ರ ಕೂಡ ತನ್ನ ಉಚ್ಛ ರಾಶಿಯಾಗಿರುವ ಮೀನ ರಾಶಿಯಲ್ಲಿ ಇರಲಿದ್ದಾನೆ. ಇದೊಂದು ದುರ್ಲಭ ಯೋಗ ಎಂದು ಹೇಳಲಾಗುತ್ತದೆ. ಎರಡು ದೊಡ್ಡ ಗ್ರಹಗಳು ಈ ರೀತಿಯ ವಿಶಿಷ್ಟ ಸ್ಥಿತಿಯಲ್ಲಿರುವುದು ವಿಶೇಷ ಎಂದು ಹೇಳಲಾಗುತ್ತದೆ. ಇದಕ್ಕೂ ಮೊದಲು ಈ ರೀತಿಯ ಯೋಗ ಫೆಬ್ರವರಿ 25, 1903ರಲ್ಲಿ ಕೂಡಿ ಬಂದಿತ್ತು. ಅಂದೂ ಕೂಡ ಮಹಾಶಿವರಾತ್ರಿಯ ದಿನವಾಗಿತ್ತು. ಅಷ್ಟೇ ಅಲ್ಲ ಫೆಬ್ರುವರಿ 21ರ ಮಹಾಶಿವರಾತ್ರಿಯ ದಿನ ಸರ್ವಾರ್ಥ ಸಿದ್ಧಿ ಯೋಗ ಕೂಡ ಕೂಡಿಬಂದಿದೆ. ಅಂದರೆ, ಈ ಬಾರಿ ಗುರು ಕೂಡ ತನ್ನ ಧನು ರಾಶಿಯಲ್ಲಿ ವಿರಾಜಮಾನನಾಗಲಿದ್ದಾನೆ.
ಈ ಯೋಗದಲ್ಲಿ ಶಿವನ ಆರಾಧನೆ ಮಾಡಿದ ಭಕ್ತಾದಿಗಳು ಶನಿ, ಗುರು, ಶುಕ್ರ ದೋಷಗಳಿಂದ ಮುಕ್ತರಾಗಲಿದ್ದಾರೆ. ಈ ಬಾರಿಯ ಶಿವರಾತ್ರಿ ದಿನದಂದು ಯಾವುದೇ ಹೊಸ ಕಾರ್ಯ ಆರಂಭಿಸುವುದು ಶುಭ ಫಲ ನೀಡಲಿದೆ ಎನ್ನಲಾಗಿದೆ. ಶಿವರಾತ್ರಿಯ ಈ ಶುಭ ದಿನದಂದು ಶನಿಯ ಜೊತೆ ಚಂದ್ರ ಕೂಡ ಇರಲಿದ್ದು ವಿಷಯೋಗ ನಿರ್ಮಾಣಗೊಳ್ಳಲಿದೆ. ಇದಕ್ಕೂ ಮೊದಲು 28 ವರ್ಷಗಳ ಹಿಂದೆ ಶಿವರಾತ್ರಿಯ ದಿನದಂದು ವಿಷಯೋಗ ಕೂಡಿ ಬಂದಿತ್ತು.