ಬುಲಂದ್ಶಹರ್ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿ ಬಂಧನ
ಬುಲಂದ್ ಶಹರ್ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಹತ್ಯೆ ಸಂಬಂಧ ಪ್ರಮುಖ ಆರೋಪಿ ಯೋಗೇಶ್ ರಾಜ್ ಬಂಧನ.
ಲಕ್ನೋ: ಗೋಹತ್ಯೆ ವಿಚಾರವಾಗಿ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ಯೋಗೇಶ್ ರಾಜ್ ನನ್ನು ಬಂಧಿಸಲಾಗಿದೆ.
ತಲೆಮರೆಸಿಕೊಂಡಿದ್ದ ಯೋಗೇಶ್ ರಾಜ್ ನನ್ನು ಬಜರಂಗದಳ ನಾಯಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಡಿಸೆಂಬರ್ ನಲ್ಲಿ ನಡೆದಿದ್ದ ಬುಲಂದ್ಶಹರ್ ಗುಂಪು ಘರ್ಷಣೆಯಲ್ಲಿ ಹಾಡಹಗಲೇ ಪೋಲೀಸ್ ಅಧಿಕಾರಿ ಹತ್ಯೆ ನಡೆದಿದ್ದು ದೇಶಕ್ಕೆ ದೇಶವೇ ಬೆಚ್ಚಿ ಬೀಳುವಂತಾಗಿತ್ತು. ಈ ಘಟನೆಯಲ್ಲಿ ಇನ್ಸ್ಪೆಕ್ಟರ್ ಸುಬೋಧ್ ಕುಮಾರ್ ಮತ್ತು 20 ವರ್ಷದ ಸುಮಿತ್ ಮೃತಪಟ್ಟಿದ್ದರು.
ಹಿಂಸಾಚಾರ ಪ್ರಕರಣದ ತನಿಖೆ ಚುರುಕುಗೊಳಿಸಿದ ವಿಶೇಷ ತನಿಖಾ ತಂಡ(ಎಸ್‌ಐಟಿ), ನೂರಾರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿತ್ತು. ಒಂದು ಸಿಸಿಟಿವಿ ದೃಶ್ಯದಲ್ಲಿ, ಯುವಕನೊಬ್ಬ ಹುತಾತ್ಮ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಅವರ ಗನ್ ಕದ್ದು, ಅವರನ್ನೇ ಹತ್ಯೆ ಮಾಡುವ ದೃಶ್ಯ ಸೆರೆಯಾಗಿರುವುದು ಕಂಡುಬಂದಿತ್ತು.