ನಿತಿನ್ ಗಡ್ಕರಿ ಪ್ರಧಾನಿಯಾಗಲಿ; ಆರ್‌ಎಸ್‌ಎಸ್‌ಗೆ ರೈತ ಮುಖಂಡರಿಂದ ಪತ್ರ
2014ರಲ್ಲಿ ನಿತಿನ್ ಗಡ್ಕರಿ ಅವರು ಪಕ್ಷದ ರಾಷ್ಟ್ರಾಧ್ಯಕ್ಷರಾಗಿದ್ದಾಗ ಗೆಲುವು ಬಿಜೆಪಿ ಕೈಹಿಡಿದಿತ್ತು. ಹಾಗಾಗಿ ಮತ್ತೆ ಪಕ್ಷದ ನೇತೃತ್ವವನ್ನು ನಿತಿನ್ ಗಡ್ಕರಿ ಅವರಿಗೆ ವಹಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ನಾಗ್ಪುರ: ಪ್ರಧಾನಿ ಮೋದಿ ಅವರ ಬದಲಿಗೆ ನಿತಿನ್ ಗಡ್ಕರಿ ಅವರನ್ನು ಪ್ರಧಾನ ಮಂತ್ರಿಯಾಗಿ ಮಾಡಿ ಎಂದು ರೈತ ಮುಖಂಡರೊಬ್ಬರು ಆರ್‌ಎಸ್‌ಎಸ್‌ಗೆ ಪತ್ರ ಬರೆದಿದ್ದಾರೆ.
ಇತ್ತಿಚೆಗೆ ನಡೆದ ಪಂಚ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದ ಬೆನ್ನಲ್ಲೇ ಮಹಾರಾಷ್ಟ್ರದ ವಿದರ್ಭ ಜಿಲ್ಲೆಯ ರೈತ ನಾಯಕ ಕಿಶೋರ್ ತಿವಾರಿ ಅವರು, ಪ್ರಧಾನಮಂತ್ರಿಯನ್ನು ಬದಲಿಸಲು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕೆಂದರೆ ಬಿಜೆಪಿ ಹಿರಿಯ ನಾಯಕ ನಿತಿನ್ ಗಡ್ಕರಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕು ಎಂದಿದ್ದಾರೆ.
ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಸುರೇಶ್ ಜೋಶಿ ಅವರನ್ನುದ್ದೇಶಿಸಿ ಬರೆದಿರುವ ಪತ್ರದಲ್ಲಿ ನೋಟು ಅಮಾನ್ಯೀಕರಣ, ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) , ಇಂಧನ ಬೆಲೆ ಏರಿಕೆ ಮತ್ತು ಇತರ ಜನವಿರೋಧಿ ಯೋಜನೆಗಳನ್ನು ಜಾರಿಗೆ ತಂದ ನಾಯಕರಿಂದಾಗಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಸೋಲಬೇಕಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.