ಮಾಲೆಂಗಾವ್ ಸ್ಫೋಟ: ಪ್ರಗ್ಯಾ ಸಿಂಗ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ವಾರಕ್ಕೊಮ್ಮೆ ಹಾಜರಾಗಲು ಕೋರ್ಟ್ ಆದೇಶ
ಪ್ರಕರಣದ ಆರೋಪಿಗಳು ವಿಚಾರಣೆಗೆ ನಿರಂತರವಾಗಿ ಗೈರಾಗುತ್ತಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಎನ್ಐಎ ನ್ಯಾಯಾಲಯದ ನ್ಯಾಯಮೂರ್ತಿ ವಿನೋದ್ ಪದಾಲ್ಕರ್ ಈ ಆದೇಶ ನೀಡಿದ್ದಾರೆ.
ನವದೆಹಲಿ: ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಸೇರಿದಂತೆ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲಾ ಆರೋಪಿಗಳು ವಾರಕೊಮ್ಮೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಂಬೈ ಎನ್ಐಎ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.
ಪ್ರಕರಣದ ಆರೋಪಿಗಳು ವಿಚಾರಣೆಗೆ ನಿರಂತರವಾಗಿ ಗೈರಾಗುತ್ತಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಎನ್ಐಎ ನ್ಯಾಯಾಲಯದ ನ್ಯಾಯಮೂರ್ತಿ ವಿನೋದ್ ಪದಾಲ್ಕರ್ ಈ ಆದೇಶ ನೀಡಿದ್ದಾರೆ. ಅಲ್ಲದೆ, ಸೂಕ್ತ ಕಾರಣಗಳಿಲ್ಲದೆ ಗೈರಾಗುವವರಿಗೆ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂದು ಕೋರ್ಟ್ ಹೇಳಿದ್ದು, ಪ್ರಕರಣದ ಮುಂದಿನ ವಿಚಾರಣೆ ಮೇ 20ಕ್ಕೆ ನಡೆಯಲಿದೆ.
ಪ್ರಗ್ಯಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಪುರೋಹಿತ್ ಹೊರತುಪಡಿಸಿ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ, ಅಜಯ್ ರಾಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ಪ್ರಕರಣದ ಇತರ ಆರೋಪಿಗಳಗಿದ್ದಾರೆ. ಆದರೆ ಇವರೆಲ್ಲರೂ ಜಾಮೀನು ಪಡೆದು ಹೊರಗಿದ್ದಾರೆ.
2008ರ ಸೆಪ್ಟೆಂಬರ್ 29ರಂದು ಮಾಲೆಗಾಂವ್ ಪಟ್ಟಣದಲ್ಲಿ ಸಂಭವಿಸಿದ ಎರಡು ಬಾಂಬ್ ಸ್ಫೋಟದಲ್ಲಿ 7 ಮಂದಿ ಸಾವನ್ನಪ್ಪಿ 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ಆರೋಪಿಗಳಾದ ಪ್ರಜ್ಞಾ ಠಾಕೂರ್ ಮತ್ತು ಕರ್ನಲ್ ಪುರೋಹಿತ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120 ಬಿ, ಪ್ರಕರಣದ 302, 307, 304, 326, 427, 153 ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.