ನವದೆಹಲಿ: ಲೋಕಪಾಲ್ ಆಯ್ಕೆ ಮತ್ತು ನೇಮಕಕ್ಕೆ ಸಂಬಂಧಿಸಿದಂತೆ ನಡೆಯಲಿರುವ ನಿರ್ಣಾಯಕ ಸಭೆಗೆ ವಿಶೇಷ ಅತಿಥಿಯಾಗಿ ಭಾಗವಹಿಸಲು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿಗೆ ಪತ್ರ ಬರೆದಿದ್ದಾರೆ. ಲೋಕಪಾಲರನ್ನು ನೇಮಕ ಮಾಡುವ ಸಂಬಂಧ ನಡೆಯಲಿರುವ ಸಭೆಗೆ ತಾವು ಹಾಜರಾಗುವುದಿಲ್ಲ. ಏಕೆಂದರೆ ಸಭೆಯಲ್ಲಿ ತಮಗೆ ವಿಶೇಷ ಆಹ್ವಾನಿತನ ಸ್ಥಾನ ನೀಡಲಾಗಿದೆಯಷ್ಟೆ. ಹೀಗಾಗಿ ಡಮ್ಮಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಅದನ್ನು ವಿರೋಧಿಸುವ ಅಧಿಕಾರ ತಮಗೆ ಇರುವುದಿಲ್ಲ. ಹೀಗಾಗಿ ಸಭೆಯಲ್ಲಿ ಭಾಗವಹಿಸದೇ ಇರಲು ಖರ್ಗೆ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. 


ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಪಾಲ ನೇಮಕ ಆಯ್ಕೆ ನಿರ್ಣಾಯಕವಾಗಿದ್ದು, ಇಂತಹ ಮಹತ್ವದ ಹುದ್ದೆಗೆ ಅರ್ಹರನ್ನು ನೇಮಕ ಮಾಡುವಾಗ ಪ್ರತಿಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳುವುದ ಅನಿವಾರ್ಯ. ಆದರೆ ಮೋದಿ ಸರ್ಕಾರ ಹೆಸರಿಗೆ ಮಾತ್ರ ಎಂಬಂತೆ ಖರ್ಗೆ ಅವರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿದೆ. ಆ ಮೂಲಕ ಪ್ರತಿಪಕ್ಷಗಳಿಲ್ಲದೇ ಲೋಕಪಾಲ ಆಯ್ಕೆ ಮಾಡುವುದು ಕೇಂದ್ರ ಸರ್ಕಾರದ ಹುನ್ನಾರವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 


ಅಲ್ಲದೆ, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ದಾಳಿ ನಡೆಸಿದ ಅವರು, ಲೋಕಪಾಲ್ ನೇಮಕಕ್ಕೆ ನಾಲ್ಕು ವರ್ಷಗಳು ವಿಳಂಬವಾಗಿರುವುದಕ್ಕೆ ಉತ್ತರ ನೀಡುವಂತೆ ಕೇಳಿದ್ದಾರೆ. "ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2013ರಲ್ಲಿ ಲೋಕಪಾಲ ಕಾಯಿದೆಗೆ ಅಂಗಿಕಾರ ನೀಡಿ, 2014 ರ ಜನವರಿ 16ರಂದು ಜಾರಿಗೆ ತಂದಿತು. ಆದರೀಗ, ಬಿಜೆಪಿ ಸರ್ಕಾರ ಸುಮಾರು ನಾಲ್ಕು ವರ್ಷಗಳ ನಂತರ ಲೋಕಪಾಲರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ" ಎಂದು ಅವರು ವ್ಯಂಗ್ಯ ಮಾಡಿದ್ದಾರೆ. 


ಲೋಕಪಾಲರನ್ನು ನೇಮಕ ಮಾಡುವ ಬಗ್ಗೆ ಹೆಚ್ಚಿನ ಪ್ರಧಾನಿ ಸಭೆಯಲ್ಲದೆ ಭಾರತದ ಮುಖ್ಯ ನ್ಯಾಯಮೂರ್ತಿ ದಿಪಾಕ್ ಮಿಶ್ರಾ ಮತ್ತು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಭಾಗವಹಿಸಲಿದ್ದಾರೆ.