ಬಿಜೆಪಿ ಹಠಾವೋ, ದೇಶ್ ಬಚಾವೋ ನಮ್ಮ ಘೋಷ ವಾಕ್ಯ: ಮಮತಾ ಬ್ಯಾನರ್ಜಿ
ಬಿಜೆಪಿ ಹಠಾವೋ, ದೇಶ ಬಚಾವೋ ಮುಂದಿನ ಚುನಾವಣೆಗೆ ಘೋಷವಾಕ್ಯವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪುನರುಚ್ಚರಿಸಿದ್ದಾರೆ.
ಕೊಲ್ಕತ್ತಾ: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ವಿರುದ್ಧ ಜನತೆ ಅಸಮಾಧಾನಗೊಂಡಿದ್ದು, ಬಿಜೆಪಿ ಹಠಾವೋ, ದೇಶ ಬಚಾವೋ ಮುಂದಿನ ಚುನಾವಣೆಗೆ ಘೋಷವಾಕ್ಯವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪುನರುಚ್ಚರಿಸಿದ್ದಾರೆ.
2014ರಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಬಿಜೆಪಿ ಈಡೇರಿಸಿಲ್ಲ. ಹಾಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ ಯಾರೂ ಮತ ನೀಡುವುದಿಲ್ಲ. ಯಾರೂ ಸದೃಢರಾಗಿರುತ್ತಾರೋ ಅಂತಹವರಿಗೆ ಮಾತ್ರ ಜನತೆ ಮತ ನೀಡಲಿದ್ದಾರೆ. ಬಲವಾದ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಪ್ರಧಾನಮಂತ್ರಿ ಅಭ್ಯರ್ಥಿಯನ್ನು ನಂತರ ಘೋಷಣೆ ಮಾಡಲಾಗುವುದು ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಯನ್ನು ಸೋಲಿಸಲಿದ್ದು, ದೇಶ ಮಹತ್ವದ ರಾಜಕೀಯ ಬದಲಾವಣೆಗೆ ಸಾಕ್ಷಿಯಾಗಲಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇ.31 ರಷ್ಟು ಮತ ಗಳಿಕೆಯಿಂದ ಅಧಿಕಾರದ ಬಂದಿದ್ದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಒಂದು ವೇಳೆ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.