ಪಶ್ಚಿಮ ಬಂಗಾಳ: ಬಿಜೆಪಿ ಸದಸ್ಯತ್ವ ಕಾರ್ಡ್‌ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಫೋಟೋ ಹಾಕಿ ಬಿಜೆಪಿಯಿಂದ ನಕಲಿ ಸದಸ್ಯತ್ವ ನೋಂದಣಿ ಚೀಟಿ ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಶಿಕ್ಷಣ ಸಚಿವ ಪಾರ್ಥಾ ಚಟರ್ಜಿ ಅವರು  ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮಸಿ ಬಳಿಯಲು ಬಿಜೆಪಿ ಈ ಕೆಲಸ ಮಾಡಿದೆ ಎಂದು ಚಟರ್ಜಿ ಹೇಳಿದ್ದಾರೆ. ರಾಜ್ಯ ಸರ್ಕಾರ ಇದರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳುತ್ತದೆ. ಈ  ಕೃತ್ಯದಲ್ಲಿ ಭಾಗಿಯಾಗಿರುವವರು ಸೈಬರ್ ಅಪರಾಧ ಕಾನೂನಿನಡಿಯಲ್ಲಿ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.


ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನಾಚರಣೆಯಂದು ಬಿಜೆಪಿ ಶನಿವಾರ ರಾಷ್ಟ್ರವ್ಯಾಪಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಿಂದ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಲಂಗಾಣದಿಂದ ಚಾಲನೆ ನೀಡಿದರು. ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಅಹಮದಾಬಾದ್‌ನಿಂದಲೂ, ಕೇಂದ್ರ ಸಚಿವ ನಿತಿನ್ ಗಡ್ಕರಿ ಇದನ್ನು ನಾಗ್ಪುರದಿಂದಲೂ ಸದಸ್ಯತ್ವ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದ್ದರು. 


ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದು ಎಲ್ಲಾ ವರ್ಗದ ಜನರನ್ನು ಬಿಜೆಪಿ ಕುಟುಂಬದೊಂದಿಗೆ ಸಂಪರ್ಕಿಸುತ್ತದೆ ಮತ್ತು ಪಕ್ಷವನ್ನು ಬಲಪಡಿಸುತ್ತದೆ ಎಂದು ಹೇಳಿದರು. "ನಮ್ಮೆಲ್ಲರ ಸ್ಫೂರ್ತಿ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಜಯಂತಿಯಂದು, ಬಿಜೆಪಿ ಸದಸ್ಯತ್ವ ನೋಂದಣಿ ಪ್ರಾರಂಭವಾಗಲಿದೆ. ನಾನು ಕಾಶಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇನೆ. ಈ ಅಭಿಯಾನವು ಎಲ್ಲಾ ವರ್ಗದ ಜನರನ್ನು ಬಿಜೆಪಿ ಕುಟುಂಬದೊಂದಿಗೆ ಮತ್ತಷ್ಟು ಸಂಪರ್ಕಿಸುತ್ತದೆ. ನಮ್ಮ ಪಕ್ಷವನ್ನು ಬಲಪಡಿಸುತ್ತದೆ" ಎಂದು ಪ್ರಧಾನಿ ಸದಸ್ಯತ್ವ ಚಾಲನೆ ನೀಡುವ ಮೊದಲು ಟ್ವೀಟ್ ಮಾಡಿದ್ದರು.


ಏತನ್ಮಧ್ಯೆ, ಪಿಎಂ ಮೋದಿಯವರ ಅಧಿಕೃತ ಅಪ್ಲಿಕೇಶನ್ ನರೇಂದ್ರ ಮೋದಿ ಅಥವಾ ನಮೋ ಆ್ಯಪ್ ಹೊಸ ಆಯ್ಕೆಯನ್ನು ಪಡೆದುಕೊಂಡಿದೆ. ಜನರು ಬಿಜೆಪಿಗೆ ಸೇರಲು ಬಯಸಿದರೆ ನಮೋ ಆ್ಯಪ್ ಬಳಸಿಕೊಳ್ಳಬಹುದು. ಬಳಕೆದಾರರು ನಾಮೋ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಅಪ್ಲಿಕೇಶನ್‌ನಲ್ಲಿ ತಕ್ಷಣ ಸದಸ್ಯತ್ವ ಕಾರ್ಯಕ್ರಮದ ಅಧಿಸೂಚನೆಯು ಗೋಚರಿಸುತ್ತದೆ. ಅದರ ನಂತರ, ಬಳಕೆದಾರರ ಲಾಗ್-ಇನ್ ಐಡಿ, ಫೋನ್ ಸಂಖ್ಯೆ ಮತ್ತು ಸ್ಥಳ ವಿವರಗಳನ್ನು ಕೇಳಲಾಗುತ್ತದೆ. ಬಿಜೆಪಿಯ ಸದಸ್ಯತ್ವ ಕೇಡರ್‌ಗೆ ಸೇರಲು ಬಳಕೆದಾರರು ತಮ್ಮ ಕುಟುಂಬ ಸದಸ್ಯರ ಹೆಸರುಗಳನ್ನು ಸೇರಿಸುವ ಆಯ್ಕೆಯನ್ನು ಸಹ ಪಡೆಯುತ್ತಾರೆ.