ಕೋಲ್ಕತ್ತಾ: ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸುವುದು ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸುವ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆದಿದೆ. ಏತನ್ಮಧ್ಯೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ರಾಜಕೀಯ ನಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. 


COMMERCIAL BREAK
SCROLL TO CONTINUE READING

ಕಲಂ 370ನ್ನು ರದ್ದುಗೊಳಿಸಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಮೆಹಬೂಬಾ ಮತ್ತು ಅಬ್ದುಲ್ಲಾ ಅವರಂತಹ ನಾಯಕರು ಭಯೋತ್ಪಾದಕರಲ್ಲ ಮತ್ತು "ಪ್ರತ್ಯೇಕಿಸಲು ಸಾಧ್ಯವಿಲ್ಲ" ಎಂದು ಹೇಳಿದರು. “ಫಾರೂಕ್ ಅಬ್ದುಲ್ಲಾ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮೆಹಬೂಬಾ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಬಂಧಿಸಲಾಗಿದೆ. ಚುನಾಯಿತ ನಾಯಕರನ್ನು ಬಂಧಿಸಲು ಅವರು ಭಯೋತ್ಪಾದಕರಲ್ಲ” ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.


ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ಮಸೂದೆಯ ಕುರಿತು ಮಾತನಾಡಿದ ಮಮತಾ, “ಮಸೂದೆಯನ್ನು ಬೆಂಬಲಿಸಲು ಅಥವಾ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲ”. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಈ ಕ್ರಮ ಕೈಗೊಂಡ ವಿಧಾನ ಮತ್ತು ಕಾರ್ಯವಿಧಾನವನ್ನು ಒಪ್ಪುವುದಿಲ್ಲ ಎಂದು ಅವರು ಹೇಳಿದರು. 


ಕಾಶ್ಮೀರ ವಿಷಯದಲ್ಲಿ ಶಾಂತಿಯುತ ಮಾತುಕತೆ ಮತ್ತು ನಿರ್ಣಯದ ಪರವಾಗಿ ಮಮತಾ ಬ್ಯಾನರ್ಜಿ ಬ್ಯಾಟಿಂಗ್ ಮಾಡಿದರು.


ಮಂಗಳವಾರ ಲೋಕಸಭೆಯಲ್ಲಿಯೂ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಯಕರನ್ನು ಬಂಧಿಸುವ ಬಗ್ಗೆ ಪ್ರಶ್ನೆಗಳು ಎದ್ದವು. ಡಿಎಂಕೆ ಸಂಸದರಾದ ಟಿ.ಆರ್.ಬಾಲು ಮತ್ತು ದಯಾನಿಧಿ ಮಾರನ್ ಅವರು ಜಮ್ಮು-ಕಾಶ್ಮೀರದಲ್ಲಿ ಬಂಧನಕ್ಕೊಳಗಾಗಿರುವ ರಾಜಕೀಯ ನಾಯಕರ ಬಗ್ಗೆ ದನಿ ಎತ್ತಿದರು. “ಈ ಸದನದ ಸದಸ್ಯ ಫಾರೂಕ್ ಅಬ್ದುಲ್ಲಾ ಕಾಣೆಯಾಗಿದ್ದಾರೆ. ಅವರನ್ನು ಬಂಧಿಸಲಾಗಿದೆ” ಎಂದು ದಯಾನಿಧಿ ಮಾರನ್ ಆಕ್ರೋಶ ವ್ಯಕ್ತಪಡಿಸಿದರು.


ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಜಮ್ಮು ಮತ್ತು ಕಾಶ್ಮೀರದ ಬೆಳವಣಿಗೆಗಳ ಬಗ್ಗೆ ಸರ್ಕಾರವನ್ನು ದೂಷಿಸಿದ್ದಾರೆ. "ಸರ್ಕಾರ ಏಕಪಕ್ಷೀಯವಾಗಿ ಕಾಶ್ಮೀರವನ್ನು ಹರಿದುಹಾಕಿದ್ದರಿಂದ, ಅಲ್ಲಿನ ಚುನಾಯಿತ ಪ್ರತಿನಿಧಿಗಳನ್ನು ಬಂಧಿಸಿದ್ದರಿಂದ, ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದ್ದರಿಂದ ರಾಷ್ಟ್ರೀಯ ಏಕತೆ ವೃದ್ಧಿಯಾಗುವುದಿಲ್ಲ. ಈ ರಾಷ್ಟ್ರವನ್ನು ಇಲ್ಲಿನ ಜನತೆ ನಿರ್ಮಿಸಿದ್ದಾರೆ. ದೇಶವೆಂದರೆ ಭೂಮಿಯ ತುಂಡುಗಳಲ್ಲ. ಅಧಿಕಾರವನ್ನು ಹೀಗೆ ದುರುಪಯೋಗಪಡಿಸಿಕೊಂಡಿರುವುದು ನಮ್ಮ ದೇಶದ ರಾಷ್ಟ್ರೀಯ ಭದ್ರತೆಯ ಮೇಲೆ ದುಷ್ಪರಿಣಾಮ ಬೀರಲಿದೆ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.