ಸಿಲಿಗುರಿ: ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಅಭಿವೃದ್ಧಿಯ ಸ್ಪೀಡ್ ಬ್ರೇಕರ್ ಇದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.


COMMERCIAL BREAK
SCROLL TO CONTINUE READING

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ನರೇಂದ್ರ ಮೋದಿ, ಕೇಂದ್ರ ಸರ್ಕಾರ ಬಡವರ ಅಭಿವೃದ್ಧಿಗಾಗಿ ರೂಪಿಸಿರುವ ಹಲವು ಯೋಜನೆಗಳ ಅನುಷ್ಠಾನಕ್ಕೆ ಸಿಎಂ ಮಮತಾ ಬ್ಯಾನರ್ಜಿ ತಡೆಯೊಡ್ಡಿದ್ದಾರೆ. ಮುಖ್ಯವಾಗಿ ಆಯುಷ್ಮಾನ್​ ಭಾರತ್​ ಯೋಜನೆಯ ಲಾಭ ಪಶ್ಚಿಮ ಬಂಗಾಳದ ಜನರಿಗೆ ಸಿಗದಂತೆ ಸ್ಪೀಡ್​ ಬ್ರೇಕರ್​ ದೀದಿ ತಡೆದಿದ್ದಾರೆ. ಅಷ್ಟೇ ಅಲ್ಲದೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗೆ ಹಣ ವರ್ಗಾವಣೆಗೂ ತಡೆಯೊಡ್ಡಿದ್ದಾರೆ. ಹೀಗಾಗಿ ಅಭಿವೃದ್ಧಿಯ ಪಥಕ್ಕೆ ಮರಳಲು ನಾನು ಈ ಸ್ಪೀಡ್​ ಬ್ರೇಕರ್​ ಯಾವಾಗ ದಾರಿಯಿಂದ ಪಕ್ಕಕ್ಕೆ ಸರಿಯುತ್ತದೆ ಎಂದು ಕಾಯುತ್ತಿದ್ದೇನೆ ಎಂದು ಮೋದಿ ಹೇಳಿದರು.


ಮತ್ತೊಂದೆಡೆ ಕಾಂಗ್ರೆಸ್​ ಪಕ್ಷದ ಚುನಾವಾನಾ ಪ್ರಣಾಳಿಕೆ ಬಗ್ಗೆ ಮಾತನಾಡಿದ ಮೋದಿ, ಕಾಂಗ್ರೆಸ್ ನಮ್ಮ ಸೇನಾ ಪಡೆಗಳಿಗೆ ಭಯೋತ್ಪಾದಕರ ವಿರುದ್ಧ ಹೋರಾಡಲು ರಕ್ಷಣಾ ಕೋಟೆಯಂತೆ ನೆರವಾಗುವ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA)ಯನ್ನು ತಿದ್ದುಪಡಿ ಮಾಡುವುದಾಗಿ ತಿಳಿಸಿದೆ. ಈ ಮೂಲಕ ನಮ್ಮ ಭದ್ರತಾ ಪಡೆಗಳನ್ನು ಅಸಹಾಯಕರನ್ನಾಗಿಸಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.