ದೆಹಲಿ ಸಿಎಂ ಕೇಜ್ರಿವಾಲ್ ಭೇಟಿಗಾಗಿ ಬಂದಿದ್ದ ವ್ಯಕ್ತಿ ಬಳಿ `ಸಜೀವ ಗುಂಡು` ಪತ್ತೆ
ಮೆಣಸಿನ ಪುಡಿ ದಾಳಿ ಬಳಿಕ ನಡೆಯುತ್ತಿರುವ 2ನೇ ಘಟನೆ ಇದಾಗಿದೆ.
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭೇಟಿಯಾಗಲು ಬಂದಿದ್ದ ವ್ಯಕ್ತಿಯೊಬ್ಬ ಜೀವಂತ ಗುಂಡುಗಳೊಂದಿಗೆ ಸಿಕ್ಕಿಬಿದ್ದಿದ್ದು, ಶಸ್ತ್ರಾಸ್ತ್ರ ಕಾಯಿದೆಯಡಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮಹಮದ್ ಇಮ್ರಾನ್ (39) ಎಂದು ಗುರುತಿಸಲಾಗಿದ್ದು, ಈತ ದೆಹಲಿ ಮಸೀದಿಯೊಂದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾನೆಂದು ಹೇಳಲಾಗಿದೆ.
ಈತ ಜನತಾ ದರ್ಬಾರ್‌ನಲ್ಲಿ ಪಾಲ್ಗೊಳ್ಳಲು ಇತರ ಸುಮಾರು 10ರಿಂದ 12 ಮಂದಿಯ ಮುಸ್ಲಿಂ ಮುಲ್ಲಾ ಗಳ ಗುಂಪಿನೊಂದಿಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಸೋಮವಾರ ಆಗಮಿಸಿದ್ದ. ಈತ ಕೇಜ್ರಿವಾಲ್ ನಿವಾಸದ ಪ್ರವೇಶ ದ್ವಾರದೆಡೆಗೆ ಸಾಗಿ ಬರುತ್ತಿದ್ದಂತೆಯೇ ಆತನನ್ನು ತಡೆದು ತಪಾಸಣೆ ನಡೆಸಿದ ಪೊಲೀಸರಿಗೆ ಆತನ ಚೀಲದಲ್ಲಿ ಸಜೀವ ಗುಂಡು ಇದ್ದುದು ಪತ್ತೆಯಾಯಿತು.
ಕಳೆದ ನ.20ರಂದು ಅರವಿಂದ್ ಕೇಜ್ರಿವಾಲ್ ಮೇಲೆ ವ್ಯಕ್ತಿಯೋರ್ವ ಮೆಣಸಿನ ಪುಡಿ ಎರಚಿದ್ದ. ವಾರದೊಳಗೆ ಮತ್ತೆ ಈ ರೀತಿಯ ಘಟನೆ ನಡೆದಿರುವುದು ಗಮನಾರ್ಹವಾಗಿದೆ.