1978 ರಲ್ಲಿ ಮಣಿಪುರ ಮೂಲದ ಖೊಮ್ದ್ರಾಮ್ ಗಂಭೀರ್ ತಮ್ಮ ಮನೆಯಿಂದ ಕಾಣೆಯಾಗಿದ್ದರು. ವಿವಾಹವಾದ 2 ತಿಂಗಳಲ್ಲೇ ಯಾವುದೇ ಕಾರಣವಿಲ್ಲದೆ ಗಂಭೀರ್, ದಿಢೀರನೆ ಕಾಣೆಯಾಗಿದ್ದು ಇಡೀ ಕುಟುಂಬವನ್ನು ಬೆಚ್ಚಿಬೀಳಿಸಿತ್ತು. ಆದರೆ, ಇದೀಗ 40 ವರ್ಷಗಳ ನಂತರ ಗಂಭೀರ್ ಮುಂಬೈನಲ್ಲಿರುವುದನ್ನು ಆತನ ಕುಟುಂಬ ಸಾಮಾಜಿಕ ಮಾಧ್ಯಮದ ಮೂಲಕ ಪತ್ತೆಹಚ್ಚಿದೆ. 


COMMERCIAL BREAK
SCROLL TO CONTINUE READING

ಓರ್ವ ಛಾಯಾಗ್ರಾಹಕ ಕಳೆದ ವರ್ಷ ಅಕ್ಟೋಬರ್'ನಲ್ಲಿ ಗಂಭೀರ್ ಇರುವ ವೀಡಿಯೊವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದರು. ಕಳೆದ ಶನಿವಾರ ಗಂಭೀರ್ ಅವರ ಸೋದರಳಿಯು ಯುಟ್ಯೂಬ್'ನಲ್ಲಿ ಈ ವೀಡಿಯೊ ನೋಡಿ, ತಕ್ಷಣವೇ ಕುಟುಂಬಕ್ಕೆ ತಿಳಿಸಿದ್ದಾರೆ. ಆದಾಗ್ಯೂ, ಆರ್ಥಿಕ ಸಮಸ್ಯೆಗಳಿಂದಾಗಿ ಗಂಭೀರ್'ನನ್ನು ಕುಟುಂಬಕ್ಕೆ ಮರಳಿ ತರಲು ಅವರಿಗೆ ಸಾಧ್ಯವಾಗಲಿಲ್ಲ.


ಈ ಸಂದರ್ಭದಲ್ಲಿ ಅರುಣಾಚಲ ಪ್ರದೇಶದ ನೆರಿಸ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಅಹಿಬಾಮ್ ದಿನಾಮನಿ ಅವರು, ಮುಂಬೈ ಬೀದಿಗಳಲ್ಲಿ ವಾಸಿಸುತ್ತಿರುವ ಮಣಿಪುರದ ವ್ಯಕ್ತಿ ಬಗ್ಗೆ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿರುವ ಬಗ್ಗೆ ಕುಟುಂಬವನ್ನು ಸಂಪರ್ಕಿಸಿ ತಿಳಿಸಿದ್ದಾರೆ.


ಅದೇ ಸಮಯದಲ್ಲಿ, ಸಾಮಾಜಿಕ ಕಾರ್ಯಕರ್ತೆ ಆಂಜೆಲಿಕಾ ಅರಿಬಾಮ್, ಗಂಭೀರ್ ಅವರನ್ನು ಪತ್ತೆಹಚ್ಚಲು ಮುಂಬೈ ಪೊಲೀಸರು ಸಹಾಯ ಮಾಡಬೇಕೆಂದು ಟ್ವೀಟ್ ಮಾಡಿ ವಿನಂತಿಸಿದ್ದರು.



ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಮುಂಬೈ ಪೊಲೀಸರು ಆತನನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ಕುಟುಂಬದವರೊಂದಿಗೆ ಸಂಪರ್ಕಿಸಲು ನೆರವಾಗಿದ್ದಾರೆ. ಇದೀಗ 40 ವರ್ಷಗಳ ನಂತರ ಗಂಭೀರ್ ತನ್ನ ಮನೆಗೆ ಮರಳಿದ್ದು, ಕುಟುಂಬದಲ್ಲಿ ಸಂತಸ ಮೂಡಿಸಿದೆ.