ವಿಜಯವಾಡ: ಖಾಸಗಿ ಸಾಲದಾತರಿಂದ ಹಣ ಸಾಲ ಪಡೆದು ಮರುಪಾವತಿಸಲಾಗದೆ ಉದ್ಯಮಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಚೋದವರಂ ಗ್ರಾಮದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಜೂನ್ 24ರಂದು ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಲಕ್ಷ್ಮಣ್ ರಾವ್ ಎಂದು ಗುರುತಿಸಲಾಗಿದೆ. ತೀವ್ರ ಸುಟ್ಟಗಾಯಗಳಿಗೆ ಒಳಗಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ  ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಟ್ರಾನ್ಸ್‌ಪೋರ್ಟ್ ಉದ್ಯಮ ನಡೆಸುತ್ತಿದ್ದ ಲಕ್ಷ್ಮಣರಾವ್ ಅವರು, ಶಾರದಾ ಮತ್ತು ಅಮೀರ್ ಎಂಬ ಇಬ್ಬರು ವ್ಯಕ್ತಿಗಳಿಂದ ಸಾಲ ಪಡೆದಿದ್ದರು. ಬಡ್ಡಿ ಮೊತ್ತವನ್ನು ಪಾವತಿಸಲು ಸಾಧ್ಯವಾಗದ ಕಾರಣ ರಾವ್ ಅವರ ಆಸ್ತಿಯ ಕೆಲವು ಭಾಗವನ್ನು ತನ್ನ ಹೆಸರಿನಲ್ಲಿ ನೋಂದಾಯಿಸಲು ಶಾರದಾ ಕೇಳಿದ್ದರು. ಅದರಂತೆ ಲಕ್ಷ್ಮಣರಾವ್ ತಮ್ಮ ಜಮೀನಿನ ಅಲ್ಪ ಭಾಗವನ್ನು ಶಾರದಾ ಹೆಸರಿಗೆ ನೊಂದಾಯಿಸಿದ್ದಾರೆ. ಬಳಿಕ ಜೂನ್ 24ರಂದು ತಮ್ಮ ನಿವಾಸದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಜಯವಾಡ ಡಿಸಿಪಿ ಹರ್ಷವರ್ಧನ್ ತಿಳಿಸಿದ್ದಾರೆ.


ತಂದೆ ಬೆಂಕಿ ಹಚ್ಚಿಕೊಂಡು ಚೀರಾಡುತ್ತಿರುವ ಸದ್ದು ಕೇಳಿದ ಮಗಳು ಬೆಂಕಿ ಆರಿಸಲು ಪ್ರಯತ್ನಿಸಿ, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ವಿಜಯವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಮಗ್ರ ತನಿಖೆ ನಡೆಸುತ್ತಿದ್ದಾರೆ.