ರಾಂಬನ್: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಭೂಕುಸಿತದ ಅವಶೇಷಗಳಲ್ಲಿ ರಾತ್ರಿಯಿಡೀ ಸಿಕ್ಕಿಬಿದ್ದ ಪ್ರದೀಪ್ ಕುಮಾರ್ ಎಂಬುವ ವ್ಯಕ್ತಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ವಾಸ್ತವವಾಗಿ ಪ್ರದೇಶದ ಲುಧ್ವಾಲ್ ಗ್ರಾಮದ ಮೂಲದ ಕುಮಾರ್ ಮಂಗಳವಾರ ರಾತ್ರಿ ಮೆಹಾದ್ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ ನಿರಂತರ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ.


COMMERCIAL BREAK
SCROLL TO CONTINUE READING

ಪ್ರದೀಪ್ ಕುಮಾರ್ ತಪ್ಪಿಸಿಕೊಳ್ಳುವ ಮೊದಲೇ ಭೂಕುಸಿತದಲ್ಲಿ ಸಿಕ್ಕಿಹಾಕಿಕೊಂಡ ಅವರು ರಾತ್ರಿಯಿಡೀ ಅದರ ಭಗ್ನಾವಶೇಷಗಳಲ್ಲಿ ಸಿಲುಕಿಕೊಂಡರು. ಈ ಪ್ರದೇಶವು ಜನ ನಿಬಿಡ ಪ್ರದೇಶವಾಗಿದ್ದರಿಂದ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ದ ತಂಡವು ಈ ಪ್ರದೇಶದಲ್ಲಿ ನಿಯಮಿತವಾಗಿ ತಪಾಸಣೆ ನಡೆಸುವವರೆಗೂ ಯಾರೂ ಆತನ ರಕ್ಷಣೆಗೆ ಬರಲಿಲ್ಲ.


ಸಿಆರ್‌ಪಿಎಫ್‌ನ 72 ಬೆಟಾಲಿಯನ್ ಬುಧವಾರ ಮುಂಜಾನೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ತಪಾಸಣೆ ನಡೆಸುತ್ತಿದ್ದ ಸಮಯದಲ್ಲಿ ಭೂಕುಸಿತ ಪ್ರದೇಶಕ್ಕೆ ಸಮೀಪವಿರುವ 147 ಮೈಲಿಗಲ್ಲು ತಲುಪಿದಾಗ, ಅವರ ನಾಯಿ ಅಜಾಕ್ಸಿ ಎಚ್ಚರಿಕೆಯ ಸಂಕೇತಗಳನ್ನು ನೀಡಲು ಪ್ರಾರಂಭಿಸಿತು.


ನಾಯಿಯಿಂದ ಬಂದ ಸಂಕೇತವನ್ನು ಅನುಸರಿಸಿ, ಸಿಆರ್‌ಪಿಎಫ್ ಸಿಬ್ಬಂದಿ ಈ ಪ್ರದೇಶದಲ್ಲಿ ಹುಡುಕಾಟ ಆರಂಭಿಸಿ ಮಂಗಳವಾರ ರಾತ್ರಿ ಸಂಭವಿಸಿದ ಭೂಕುಸಿತದ ಅವಶೇಷಗಳಲ್ಲಿ ಸಿಲುಕಿದ್ದ ಪ್ರದೀಪ್ ಕುಮಾರ್‌ನನ್ನು ಪತ್ತೆ ಮಾಡಿದರು. ಬಳಿಕ ಸೇನೆಗೆ ಮಾಹಿತಿ ರವಾನಿಸಿದ ಸಿಆರ್‌ಪಿಎಫ್ ಸಿಬ್ಬಂದಿ, ಭಾರತೀಯ ಸೇನೆಯ ಸಿಬ್ಬಂದಿಗಳ ಸಹ ಕಾರ್ಯಾಚರಣೆಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. 


ಭೂಕುಸಿತದಿಂದಾಗಿ ಮಣ್ಣಿನ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಲು ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಸೇನೆಯ ಜಂಟಿ ತಂಡವು "ಎಚ್ಚರಿಕೆಯಿಂದ ಉತ್ಖನನ" ನಡೆಸಿದೆ. ಪ್ರದೀಪ್ ಕುಮಾರ್ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತಾದರೂ, ಘಟನೆಯ ಆಘಾತದಿಂದಾಗಿ ಅವರು ಮಾತನಾಡಲು ಸಾಧ್ಯವಾಗುತ್ತಿಲ್ಲ. ಸದ್ಯ ಅವರು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಆರ್‌ಪಿಎಫ್ ಸಿಬ್ಬಂದಿ ತಿಳಿಸಿದ್ದಾರೆ.


ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಹಲವಾರು ಪ್ರದೇಶಗಳಲ್ಲಿ ಭೂಕುಸಿತಕ್ಕೆ ಕಾರಣವಾಗಿದೆ. ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಬುಧವಾರ ಮುಚ್ಚಲಾಯಿತು.


ಹೊಸ ಟ್ರ್ಯಾಕ್ ಭೂಕುಸಿತಕ್ಕೆ ಸಿಲುಕಿದ್ದರಿಂದ ವೈಷ್ಣೋ ದೇವಿ ಯಾತ್ರೆಗೆ ಹೋಗುವ ಯಾತ್ರಾರ್ಥಿಗಳನ್ನು ಸಹ ಸಾಂಪ್ರದಾಯಿಕ ಟ್ರ್ಯಾಕ್‌ಗೆ ತಿರುಗಿಸಲಾಯಿತು. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಅಧ್ಕುವಾರಿ ಮತ್ತು ಭವನ ನಡುವೆ ಇರುವ ಹೊಸ ಟ್ರ್ಯಾಕ್‌ನಲ್ಲಿ ಭೂಕುಸಿತ ಸಂಭವಿಸಿದೆ.


ಹವಾಮಾನ ವೈಪರೀತ್ಯದಿಂದಾಗಿ ಕತ್ರ-ಶಂಜಿಚಾಟ್ ವಲಯದ ಯಾತ್ರಾರ್ಥಿಗಳನ್ನು ಕರೆದೊಯ್ಯುವ ಹೆಲಿಕಾಪ್ಟರ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.