ನವದೆಹಲಿ: ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಸೂಕ್ತ ಅಭ್ಯರ್ಥಿಯ ಹುಡುಕಾಟ ಮುಂದುವರೆದಿದ್ದು, ಪಕ್ಷವು ಎಲ್ಲಾ ಆಯ್ಕೆಗಳನ್ನು ಪರಿಗಣಿಸುತ್ತಿದೆ. ಮೂಲಗಳ ಪ್ರಕಾರ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಮುಕುಲ್ ವಾಸ್ನಿಕ್ ಅವರ ಹೆಸರು ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಮುಂಚೂಣಿಯಲ್ಲಿವೆ. ಆದರೆ ಇದುವರೆಗೂ ಯಾವ ಹೆಸರೂ ಅಂತಿಮವಾಗಿಲ್ಲ.


COMMERCIAL BREAK
SCROLL TO CONTINUE READING

ಮೂಲಗಳ ಪ್ರಕಾರ, ಮನಮೋಹನ್ ಸಿಂಗ್ ಅವರ ಹೆಸರನ್ನು ಪಕ್ಷದ ಕೆಲವು ಹಿರಿಯ ನಾಯಕರು ಬೆಂಬಲಿಸಿದ್ದಾರೆ. ಅಲ್ಲದೆ, ಮನಮೋಹನ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ನಾಲ್ಕು ವಿಭಿನ್ನ ಪ್ರದೇಶಗಳನ್ನು ಪ್ರತಿನಿಧಿಸುವ ನಾಲ್ವರನ್ನು ಕಾರ್ಯನಿರತ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಮಾತೂ ಕೇಳಿಬರುತ್ತಿದೆ. ಅಲ್ಲದೆ, ಮನಮೋಹನ್ ಸಿಂಗ್ ಅವರು ಪ್ರಾಮಾಣಿಕ ಮತ್ತು ದಕ್ಷ ಪ್ರಧಾನಿಯಾಗಿ ಹೆಸರು ಮಾಡಿದ್ದವರು. ಹಾಗಾಗಿ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲು ಪಕ್ಷದ ಯಾವುದೇ ನಾಯಕರಿಗೆ ಸಮಸ್ಯೆಯಾಗುವುದಿಲ್ಲ ಎಂದು ಪಕ್ಷ ಚಿಂತನೆ ನಡೆಸಿದೆ ಎನ್ನಲಾಗಿದೆ. 


ಮತ್ತೊಂದೆಡೆ ಮನಮೋಹನ್ ಸಿಂಗ್(86) ಅವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ನಾಯಕರ ಅವರ ಹೆಸರನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಪಕ್ಷದ ಅಧ್ಯಕ್ಷರಾದವರು ಎಲ್ಲಾ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಪಕ್ಷ ಬಲವರ್ಧನೆಗೆ ಶ್ರಮಿಸಬೇಕಾಗುತ್ತದೆ. ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಇದಕ್ಕೆ ಅವರ ಆರೋಗ್ಯ ಸಂಸ್ಯೆಗಳು ಅಡ್ಡಿಯಾಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಮುಕುಲ್ ವಾಸ್ನಿಕ್ ಕೂಡ ಮೊದಲ ಆಯ್ಕೆಯಾಗಿರಬಹುದು!
ಮನಮೋಹನ್ ಸಿಂಗ್ ಜೊತೆಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರನ್ನೂ ಸಹ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲಾಗಿದೆ ಎಂಬ ಮಾತು ಕೇಳಿಬಂದಿದೆ. ಮುಕುಲ್ ವಾಸ್ನಿಕ್ ಅವರಿಗೆ 40 ವರ್ಷಗಳ ಅನುಭವವಿದ್ದು, ಪಕ್ಷದ ಎಲ್ಲಾ ಹುದ್ದೆಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ಇದಲ್ಲದೆ, ಮುಕುಲ್ ವಾಸ್ನಿಕ್ ಅವರು ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವ ದಲಿತ ನಾಯಕನಾಗಿದ್ದು, ಅವರ ಮೇಲೆ ಯಾವುದೇ ಗುಂಪುಗಾರಿಗೆ ಅಥವಾ ಭ್ರಷ್ಟಾಚಾರದ ಆರೋಪಗಳಿಲ್ಲ. ಲೋಕಸಭೆಗೆ ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಮುಕುಲ್ ವಾಸ್ನಿಕ್ ಅವರು, ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು.


ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ
ಮಾಜಿ ಕೇಂದ್ರ ಸಚಿವ ಮುಕುಲ್ ವಾಸ್ನಿಕ್ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಉಸ್ತುವಾರಿ ವಹಿಸಿದ್ದ ತಮಿಳುನಾಡು, ಪುದುಚೇರಿ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡಿದೆ ಎಂಬುದೂ ಸಹ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರು ಪ್ರಸ್ತಾಪಿಸಲು ಮುಖ್ಯ ಕಾರಣವಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮುಕುಲ್ ವಾಸ್ನಿಕ್ ಹೊರತುಪಡಿಸಿ, ಸುಶೀಲ್ ಕುಮಾರ್ ಶಿಂಧೆ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಇತರರ ಹೆಸರುಗಳೂ ಸಹ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿವೆ. 


ಆದರೆ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯುವ ನಾಯಕನನ್ನು ಆಯ್ಕೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಕ್ಷಕ್ಕೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ, ಸಚಿನ್ ಪೈಲಟ್, ಮಿಲಿಂದ್ ದಿಯೋರಾ ಹೆಸರುಗಳೂ ಕೇಳಿಬಂದಿವೆ.